×
Ad

ನರಸಿಂಗ್‌ಗೆ ಸಂಯುಕ್ತ ವಿಶ್ವ ಕುಸ್ತಿ ಸಂಸ್ಥೆ ಹಸಿರು ನಿಶಾನೆ

Update: 2016-08-03 23:28 IST

ಹೊಸದಿಲ್ಲಿ, ಆ.3: ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ)ದಿಂದ ದೋಷಮುಕ್ತರಾಗಿರುವ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಂಯುಕ್ತ ವಿಶ್ವ ಕುಸ್ತಿ ಸಂಸ್ಥೆಯಿಂದ ಹಸಿರು ನಿಶಾನೆ ಪಡೆದಿದ್ದಾರೆ. ಆದರೆ, ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ(ವಾಡಾ) ಅನುಮತಿಗಾಗಿ ಕಾಯುತ್ತಿದ್ದಾರೆ.

ಸೋಮವಾರ ನಾಡಾದಿಂದ ಕ್ಲೀನ್ ಚಿಟ್ ಪಡೆದಿದ್ದ ನರಸಿಂಗ್ ಹೆಸರನ್ನು ರಿಯೋ ಗೇಮ್ಸ್‌ನಲ್ಲಿ 74 ಕೆಜಿ ತೂಕ ವಿಭಾಗದಲ್ಲಿ ಮರು ಪರಿಗಣಿಸಬೇಕೆಂದು ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಸಂಯುಕ್ತ ವಿಶ್ವ ಕುಸ್ತಿ ಸಂಸ್ಥೆಗೆ ಮನವಿ ಸಲ್ಲಿಸಿತ್ತು.

ನಾಡಾದಿಂದ ನರಸಿಂಗ್ ಕ್ಲೀನ್‌ಚಿಟ್ ಪಡೆದ ತಕ್ಷಣವೇ ನಾವು ವಿಶ್ವ ಕುಸ್ತಿ ಮಂಡಳಿಗೆ ಪತ್ರಬರೆದು ನರಸಿಂಗ್ ಹೆಸರನ್ನು 74 ಕೆಜಿ ತೂಕ ವಿಭಾಗಕ್ಕೆ ಪರಿಗಣಿಸಬೇಕೆಂದು ಕೋರಿದ್ದೆವು. ಸಂಯುಕ್ತ ವಿಶ್ವ ಕುಸ್ತಿ ಸಂಸ್ಥೆ ನರಸಿಂಗ್ ರಿಯೋ ಒಲಿಂಪಿಕ್ಸ್ ಸಹಿತ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿರುವುದಾಗಿ ಡಬ್ಲುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷನ್ ಶರಣ್ ಸಿಂಗ್ ಹೇಳಿದ್ದಾರೆ.

 ನರಸಿಂಗ್ ಪ್ರಕರಣದ ಕಡತವನ್ನು ಕಳುಹಿಸಿಕೊಡುವಂತೆ ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ(ವಾಡಾ) ನಾಡಾಕ್ಕೆ ಮಂಗಳವಾರ ತಿಳಿಸಿದೆ. ನರಸಿಂಗ್ ಪ್ರಕರಣವನ್ನು ಮರುಪರಿಶೀಲಿಸಲಾಗುತ್ತದೆ ಎಂದು ವಾಡಾ ಹೇಳಿದೆ. ಈ ಹಿನ್ನೆಲೆಯಲ್ಲಿ 26ರ ಹರೆಯದ ಯಾದವ್ ರಿಯೋ ವಿಮಾನ ಏರುವ ಮೊದಲು ವಾಡಾದ ಅನುಮತಿಗಾಗಿ ಕಾಯಬೇಕಾಗಿದೆ.

 ವಾಡಾ ನರಸಿಂಗ್ ಪ್ರಕರಣವನ್ನು ಅಧ್ಯಯನ ನಡೆಸಿದ ಬಳಿಕ ನಾಡಾ ವಿಚಾರಣಾಸಮಿತಿಯ ನಿರ್ಧಾರವನ್ನು ಪ್ರಶ್ನಿಸಿ 21 ದಿನಗಳೊಳಗೆ ಕ್ರೀಡಾ ಪಂಚಾಯತಿ ನ್ಯಾಯಾಲಯ(ಸಿಎಎಸ್)ದ ಮೊರೆ ಹೋಗಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News