ರಿಯೋ ಗೇಮ್ಸ್ ಸ್ಪರ್ಧಿಸಲು ನಡಾಲ್ ಸಿದ್ಧತೆ
ರಿಯೋ ಡಿ ಜನೈರೊ, ಆ.3: ಎಡ ಮಣಿಕಟ್ಟು ನೋವಿನ ಹೊರತಾಗಿಯೂ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಆಡಲು ಬದ್ಧನಾಗಿರುವೆ ಎಂದು ಸ್ಪೇನ್ ಆಟಗಾರ ರಫೆಲ್ ನಡಾಲ್ ಹೇಳಿದ್ದಾರೆ.
ನಮ್ಮ ತಂಡದೊಂದಿಗೆ ಚರ್ಚೆ ನಡೆಸಿದ ನಂತರ ಎಲ್ಲ ವಿಭಾಗದ ಪಂದ್ಯಗಳಲ್ಲೂ ಸ್ಪರ್ಧಿಸುವ ಬಗ್ಗೆ ನಿರ್ಧರಿಸಿದ್ದೇನೆ. ನಾನು ಉತ್ತಮ ಪರಿಸ್ಥಿತಿ ಎದುರಿಸುತ್ತಿಲ್ಲ. ಅಪಾಯ ಯಾವಾಗಲೂ ಇರುತ್ತದೆ ಎಂದು ವಿಶ್ವದ ನಂ.5ನೆ ಆಟಗಾರ ನಡಾಲ್ ಹೇಳಿದ್ದಾರೆ. ಇಲ್ಲಿನ ಸೆಂಟರ್‌ಕೋರ್ಟ್‌ನಲ್ಲಿ ದೀರ್ಘ ಸಮಯ ಪ್ರಾಕ್ಟೀಸ್ ನಡೆಸಿರುವ ನಡಾಲ್ ತನ್ನ ಯೋಜನೆಯ ಬಗ್ಗೆ ತಂಡದ ವೈದ್ಯರು ಹಾಗೂ ತಂಡದ ನಾಯಕ ಕಾಂಚಿಟಾ ಮಾರ್ಟಿನೆಝ್‌ರೊಂದಿಗೆ ಚರ್ಚೆ ನಡೆಸಿದ್ದಾರೆ.
ನಡಾಲ್ ಒಲಿಂಪಿಕ್ಸ್‌ನಲ್ಲಿ ಮಾರ್ಕ್ ಲೊಪೆಝ್‌ರೊಂದಿಗೆ ಡಬಲ್ಸ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬೈನ್ ಮುಗುರುಝರೊಂದಿಗೆ ಮಿಶ್ರ ಡಬಲ್ಸ್ ಪಂದ್ಯ ಆಡಲಿದ್ದಾರೆ.
ನಡಾಲ್ ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿನಲ್ಲಿ ಆಡುತ್ತಿದ್ದಾಗ ಗಾಯದ ಸಮಸ್ಯೆಯಿಂದ ಪಂದ್ಯ ಮೊಟಕುಗೊಳಿಸಿದ ಬಳಿಕ ಯಾವುದೇ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಆಡಿಲ್ಲ. 14 ಬಾರಿಯ ಚಾಂಪಿಯನ್ ನಡಾಲ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಆದರೆ, ಮಂಡಿನೋವಿನಿಂದಾಗಿ 2012ರ ಲಂಡನ್ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ನಡಾಲ್ ರಿಯೋದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸ್ಪೇನ್‌ನ ಧ್ವಜಧಾರಿಯಾಗಿ ದೇಶದ ಅಥ್ಲೀಟ್ ತಂಡವನ್ನು ಮುನ್ನಡೆಸಲಿದ್ದಾರೆ.
ನಾನು ಡಬಲ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ಅಧಿಕವಿದೆ. ಸ್ಪೇನ್ ತಂಡಕ್ಕೆ ಮಹತ್ವದ ಕೊಡುಗೆ ನೀಡಲು ಎಲ್ಲ ಪ್ರಯತ್ನ ನಡೆಸುವೆ ಎಂದು ನಡಾಲ್ ಹೇಳಿದ್ದಾರೆ.