×
Ad

ಉದ್ದೀಪನಾ ಟೆಸ್ಟ್‌ನಲ್ಲಿ ಓಟಗಾರ ಧರ್ಮಬೀರ್ ಸಿಂಗ್ ಫೇಲ್

Update: 2016-08-03 23:35 IST

    ಹೊಸದಿಲ್ಲಿ, ಆ.3: ಕಳೆದ ತಿಂಗಳು ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಓಟಗಾರ ಧರ್ಮಭೀರ್ ಸಿಂಗ್ ಫೇಲಾಗಿದ್ದು, ರಿಯೋ ಒಲಿಂಪಿಕ್ಸ್‌ಗೆ ಬೆರಳೆಣಿಕೆ ದಿನ ಬಾಕಿಯಿರುವಾಗಲೇ ಭಾರತದ ಅಥ್ಲೀಟ್‌ಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಮುಂದುವರಿದಿದೆ.

ಸುಮಾರು 36 ವರ್ಷಗಳ ಬಳಿಕ 200 ಮೀ. ಓಟದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದ ಧರ್ಮಬೀರ್ ಜುಲೈ 11 ರಂದು ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರಾನ್‌ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ನಡೆಸಿರುವ ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ.

ಧರ್ಮಬೀರ್ ‘ಎ’ ಮಾದರಿ ಪಾಸಿಟಿವ್ ಆಗಿದೆ. ಆದಾಗ್ಯೂ, ಅಥ್ಲೀಟ್ ಧರ್ಮಬೀರ್ ಡೋಪಿಂಗ್‌ನಲ್ಲಿ ಫೇಲಾಗಿರುವ ಬಗ್ಗೆ ನಾಡಾ ಭಾರತದ ಅಥ್ಲೆಟಿಕ್ಸ್ ಫೆಡರೇಶನ್‌ಗೆ ಇನ್ನೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಧರ್ಮಬೀರ್ ಮಂಗಳವಾರ ಬೆಳಗ್ಗೆ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಲು ಭಾರತದಿಂದ ತೆರಳಬೇಕಾಗಿತ್ತು. ಆದರೆ, ಅವರಿಗೆ ಬ್ರೆಝಿಲ್‌ಗೆ ತೆರಳದಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಧರ್ಮಭೀರ್ ಬಿ ಮಾದರಿಯ ಪರೀಕ್ಷೆಯ ವರದಿ ಪಡೆಯಲು ಇಚ್ಛಿಸಿದರೆ ಇನ್ನು ಏಳು ದಿನಗಳಲ್ಲಿ ವರದಿ ನೀಡಲಾಗುತ್ತದೆ ಎಂದು ನಾಡಾ ಮೂಲಗಳು ತಿಳಿಸಿವೆ. ಧರ್ಮಬೀರ್ ಬಿ ಸ್ಯಾಂಪಲ್ ಪರೀಕ್ಷೆಯಲ್ಲೂ ಫೇಲಾಗಿದ್ದರೆ ಒಲಿಂಪಿಕ್ಸ್‌ನಿಂದ ಹೊರಗುಳಿಯುವುದು ಖಚಿತವಾಗಲಿದೆ. ಧರ್ಮವೀರ್ ಎರಡನೆ ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಕಾರಣ 8 ವರ್ಷಗಳ ಕಾಲ ನಿಷೇಧ ಅಥವಾ ಆಜೀವ ನಿಷೇಧ ಎದುರಿಸಬೇಕಾಗುತ್ತದೆ. ಧರ್ಮಬೀರ್ ಬೆಂಗಳೂರಿನಲ್ಲಿ ಜು.11 ರಂದು ನಡೆದ ಇಂಡಿಯನ್ ಜಿಪಿ ಕೂಟದಲ್ಲಿ 20.50 ನಿಮಿಷದಲ್ಲಿ ಗುರಿ ತಲುಪುವುದರೊಂದಿಗೆ 200 ಮೀ. ಓಟದಲ್ಲಿ ಒಲಿಂಪಿಕ್ಸ್ ಟಿಕೆಟ್ ಪಡೆದಿದ್ದರು. ರಿಯೋ ಗೇಮ್ಸ್‌ಗೆ ಮತ್ತಷ್ಟು ಅಥ್ಲೀಟ್‌ಗಳು ಅರ್ಹತೆ ಪಡೆಯಲಿ ಎಂಬ ಉದ್ದೇಶದಿಂದ ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಈ ಅಥ್ಲೆಟಿಕ್ಸ್ ಕೂಟ ಏರ್ಪಡಿಸಿತ್ತು.

 ಧರ್ಮಬೀರ್ ಇತ್ತೀಚೆಗಿನ ದಿನಗಳಲ್ಲಿ ನಾಡಾ ನಡೆಸಿರುವ ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾಗಿರುವ ಭಾರತದ ಮೂರನೆ ಅಥ್ಲೀಟ್. ಕುಸ್ತಿಪಟು ನರಸಿಂಗ್ ಯಾದವ್ ಜು.5 ರಂದು ನಡೆಸಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿ ನಾಡಾದಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದರು. ನಾಡಾದ ಸುದೀರ್ಘ ವಿಚಾರಣೆಯ ಬಳಿಕ ಆರೋಪದಿಂದ ಮುಕ್ತರಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ಶಾಟ್‌ಪುಟ್ ಪಟು ಇಂದ್ರಜೀತ್ ಸಿಂಗ್ ಕೂಡ ಡೋಪಿಂಗ್ ಟೆಸ್ಟ್‌ನಲ್ಲಿ ಫೇಲಾಗಿದ್ದರು. ಸಿಂಗ್ ಮಂಗಳವಾರ ‘ಬಿ’ ಸ್ಯಾಂಪಲ್‌ನಲ್ಲೂ ಫೇಲಾಗಿರುವ ಕಾರಣ ಮುಂಬರುವ ರಿಯೋ ಗೇಮ್ಸ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News