×
Ad

2ನೆ ಟೆಸ್ಟ್: ಆಸ್ಟ್ರೇಲಿಯ ಗೆಲುವಿಗೆ ಕಠಿಣ ಗುರಿ

Update: 2016-08-05 12:02 IST

 ಗಾಲೆ(ಶ್ರೀಲಂಕಾ), ಆ.5: ಹಿರಿಯ ಸ್ಪಿನ್ನರ್ ರಂಗನ ಹೆರಾತ್‌ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಪಡೆದಿದ್ದ ಶ್ರೀಲಂಕಾ ತಂಡ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಗೆಲುವಿಗೆ 413 ರನ್ ಕಠಿಣ ಗುರಿ ನೀಡಿದೆ.

 ಹೆರಾತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಉಡಾಯಿಸಿದ ಶ್ರೀಲಂಕಾದ ಎರಡನೆ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2ನೆ ದಿನವಾದ ಶುಕ್ರವಾರ ಒಟ್ಟು 21 ವಿಕೆಟ್‌ಗಳು ಪತನವಾಗಿದ್ದು, ದಿನದಾಟದಂತ್ಯಕ್ಕೆ ಆಸ್ಟ್ರೇಲಿಯದ 3 ವಿಕೆಟ್ ಕಬಳಿಸಿರುವ ಶ್ರೀಲಂಕಾ ಗೆಲುವಿನ ವಿಶ್ವಾಸದಲ್ಲಿದೆೆ. ಮೊದಲ ದಿನವಾದ ಗುರುವಾರ ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ 281 ರನ್‌ಗೆ ಆಲೌಟಾಗಿ 175 ರನ್ ಮುನ್ನಡೆ ಪಡೆದಿತ್ತು.

ಎರಡನೆ ದಿನವಾದ ಶುಕ್ರವಾರ 2 ವಿಕೆಟ್‌ಗೆ 54 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯ ಹೆರಾತ್(4-35) ಹಾಗೂ ಡಿ.ಪೆರೆರಾ(4-29) ದಾಳಿಗೆ ತತ್ತರಿಸಿ ಕೇವಲ 106 ರನ್‌ಗೆ ಆಲೌಟಾಗಿದೆ. ಶ್ರೀಲಂಕಾ ವಿರುದ್ಧ ಆಡಿರುವ 28 ಟೆಸ್ಟ್ ಪಂದ್ಯಗಳಲ್ಲಿ ದಾಖಲಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ.

 2ನೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಮಿಚೆಲ್ ಸ್ಟಾರ್ಕ್(6-50) ಅಮೋಘ ಬೌಲಿಂಗ್‌ನ ಹೊರತಾಗಿಯೂ ಪೆರೇರಾ(64) ಹಾಗೂ ನಾಯಕ ಮ್ಯಾಥ್ಯೂಸ್ (47) ಕೊಡುಗೆಯ ನೆರವಿನಿಂದ 59.3 ಓವರ್‌ಗಳಲ್ಲಿ 237 ರನ್ ಗಳಿಸಿತು.

ಆಸೀಸ್‌ನ ಗೆಲುವಿಗೆ 413 ರನ್ ಗುರಿ ನೀಡಿತು. 25 ರನ್‌ಗೆ 3 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯ ಇನ್ನೂ 2 ದಿನ ಬಾಕಿ ಇರುವಾಗಲೇ ಸತತ 2ನೆ ಸೋಲಿನ ಭೀತಿಯಲ್ಲಿದೆ. ವಾರ್ನರ್(22) ಹಾಗೂ ನಾಯಕ ಸ್ಮಿತ್(1) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಿಂಹಸ್ವಪ್ನವಾದ ಹೆರಾತ್: ಇನಿಂಗ್ಸ್‌ನ 25ನೆ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಹ್ಯಾಟ್ರಿಕ್ ಸಾಧಿಸಿದ ಹೆರಾತ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಸೇರಿಸಿದರು. 24.4ನೆ ಓವರ್‌ನಲ್ಲಿ ಆಡಮ್ ವೋಗ್ಸ್ ಅವರು ಹೆರಾತ್‌ಗೆ ಮೊದಲ ಬಲಿಯಾದರು. 24.5ನೆ ಓವರ್‌ನಲ್ಲಿ ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ಪೀಟರ್ ನೇವಿಲ್ ಔಟಾದರು. 24.6ನೆ ಓವರ್‌ನಲ್ಲಿ ಬಾಲಂಗೋಚಿ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆದ ಹೆರಾತ್ ಹ್ಯಾಟ್ರಿಕ್ ಪೂರೈಸಿದರು.

38ರ ಪ್ರಾಯದ ಹೆರಾತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅತ್ಯಂತ ಹಿರಿಯ ಬೌಲರ್ ಎನಿಸಿಕೊಂಡರು. ಶ್ರೀಲಂಕಾದ ಪರ ಈ ಹಿಂದೆ ವೇಗದ ಬೌಲರ್ ನುವಾನ್ ಜೋಯ್ಸಿ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News