ಒಲಿಂಪಿಕ್ಸ್ ಮಹಿಳಾ ಹಾಕಿ : ಭಾರತ-ಜಪಾನ್ ಪಂದ್ಯ ರೋಚಕ ಡ್ರಾ
ರಿಯೋ ಡಿ ಜನೈರೊ, ಆ.7: ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ ಹಾಗೂ ಜಪಾನ್ ತಂಡಗಳು 2-2 ರಿಂದ ರೋಚಕ ಡ್ರಾ ಸಾಧಿಸಿವೆ.
ಇಲ್ಲಿನ ಒಲಿಂಪಿಕ್ ಹಾಕಿ ಸೆಂಟರ್‌ನಲ್ಲಿ ರವಿವಾರ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಬಿ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳಿಗೆ ಅಂತಿಮ ಕ್ಷಣದಲ್ಲಿ ಗೋಲು ಬಾರಿಸುವ ಅವಕಾಶಗಳಿದ್ದರೂ, ಗೋಲುಕೀಪರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ.
ಜಪಾನ್‌ನ ಯೂರಿಗೆ ಭಾರತದ ಗೋಲುಕೀಪರ್ ಸವಿತಾ ಗೋಲನ್ನು ನಿರಾಕರಿಸಿ ತಂಡಕ್ಕೆ ಆಸರೆಯಾದರು. ಮತ್ತೊಂದೆಡೆ, ಭಾರತದ ವಂದನಾ ಕಟಾರಿಯಾಗೆ ಗೋಲು ಬಾರಿಸುವ ಉತ್ತಮ ಅವಕಾಶವನ್ನು ಜಪಾನ್‌ನ ಗೋಲ್‌ಕೀಪರ್ ಸಕಿಯೊ ಅಸಾನೊ ನಿರಾಕರಿಸಿದರು.
ಮೊದಲಾರ್ಧದಲ್ಲಿ ಜಪಾನ್ 2-0 ಮುನ್ನಡೆ ಸಾಧಿಸಿದರೆ, ದ್ವಿತೀಯಾರ್ಧದಲ್ಲಿ ಭಾರತ ತಿರುಗೇಟು ನೀಡಿತು.
ಮೊದಲಾರ್ಧದ ಪಂದ್ಯ ಅಂತ್ಯಗೊಂಡಾಗ ಜಪಾನ್ 2-0 ಮುನ್ನಡೆ ಸಾಧಿಸಿತು. ನಿಶಿಕೊರಿ(15ನೆ ನಿಮಿಷ) ಹಾಗೂ ನಕಶಿಮಾ(28ನೆ ನಿ.) ತಲಾ ಒಂದು ಗೋಲು ಬಾರಿಸಿದ್ದರು. ದ್ವಿತೀಯಾರ್ಧದಲ್ಲಿ ರಾಣಿ ರಾಂಪಾಲ್(31ನೆ ನಿಮಿಷ) ಹಾಗೂ ಲಿಲಿಮಾ ಮಿಂಝ್(41ನೆ ನಿಮಿಷ) ಬಾರಿಸಿದ ತಲಾ ಒಂದು ಗೋಲು ನೆರವಿನಿಂದ ಭಾರತ ತಂಡ ಗರಿಷ್ಠ ರ್ಯಾಂಕಿನ ಜಪಾನ್ ತಂಡಕ್ಕೆ ತಿರುಗೇಟು ನೀಡಲು ಸಫಲವಾಯಿತು.
ಭಾರತದ ಮಹಿಳಾ ಹಾಕಿ ತಂಡ 36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು, ಪೂನಮ್ ರಾಣಿ ಅನುಪಸ್ಥಿತಿಯಲ್ಲಿ ಸುಶೀಲಾ ಚಾನು ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.