ಭಾರತದ ಮಹಿಳಾ ಆರ್ಚರಿ ತಂಡ ಕ್ವಾರ್ಟರ್ ಫೈನಲ್‌ಗೆ
ರಿಯೋ ಡಿಜನೈರೊ, ಆ.7: ಭಾರತದ ಆರ್ಚರಿ ಮಹಿಳಾ ತಂಡ ಕೊಲಂಬಿಯಾ ತಂಡವನ್ನು 5-3 ಅಂತರದಿಂದ ಮಣಿಸುವುದರೊಂದಿಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ರವಿವಾರ ಇಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಕುಮಾರಿ, ಬಾಂಬೆಲಾದೇವಿ ಹಾಗೂ ಲಕ್ಷ್ಮೀರಾಣಿ ಮಝಿ ಅವರನ್ನೊಳಗೊಂಡ ಭಾರತದ ಮಹಿಳಾ ಆರ್ಚರಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.
ರಾತ್ರಿ 11.45ಕ್ಕೆ ಆರಂಭವಾಗಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ರಶ್ಯವನ್ನು ಎದುರಿಸಲಿದೆ.
ಮೊದಲ ಸೆಟ್‌ನ್ನು 52-51 ಅಂತರದಿಂದ ರೋಚಕವಾಗಿ ಗೆದ್ದುಕೊಂಡ ಭಾರತ ಶುಭಾರಂಭ ಮಾಡಿತ್ತು. ಭಾರತಕ್ಕೆ 2ನೆ ಸೆಟ್‌ನ್ನು ಜಯಿಸಲು 26 ಅಂಕಗಳ ಅಗತ್ಯವಿತ್ತು. ಬಾಂಬೆಲಾದೇವಿ 9 ಅಂಕ ಹಾಗೂ ದೀಪಿಕಾ ಏಳು ಅಂಕವನ್ನು ಗಳಿಸಿದರೂ ಭಾರತ 49-50 ಅಂತರದಿಂದ ಸೋತಿತ್ತು.
ಮೂರನೆ ಸೆಟ್‌ನಲ್ಲಿ ಬಾಂಬೆಲಾದೇವಿ 9, ಲಕ್ಷ್ಮೀರಾಣಿ 7, ದೀಪಿಕಾ 10 ಅಂಕ ಗಳಿಸಿದರು. ಅಂತಿಮವಾಗಿ 3ನೆ ಸೆಟ್ 52-52 ರಿಂದ ಟೈಗೊಂಡಿತು. ನಾಲ್ಕನೆ ಹಾಗೂ ಅಂತಿಮ ಸೆಟ್‌ನಲ್ಲಿ ಕೊಲಂಬಿಯಾ ಆರ್ಚರಿಗಳು ಒತ್ತಡಕ್ಕೆ ಸಿಲುಕಿದರು. ಅಂತಿಮವಾಗಿ 52-44 ರಿಂದ ಜಯ ಸಾಧಿಸಿದ ಭಾರತ ಕ್ವಾರ್ಟರ್ ಫೈನಲ್‌ಗೆ ತಲುಪಿತು.