10 ಏರ್ ಪಿಸ್ತೂಲ್ ಸ್ಪರ್ಧೆ: ಸಿಧು ಸವಾಲು ಅಂತ್ಯ
ರಿಯೋ ಡಿ ಜನೈರೊ, ಆ.7: ಒಲಿಂಪಿಕ್ ಶೂಟಿಂಗ್ ಸೆಂಟರ್‌ನಲ್ಲಿ ರವಿವಾರ ನಡೆದ 10 ಮೀ. ಮಹಿಳೆಯರ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಹೀನಾ ಸಿಧು 14ನೆ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.
ಸಿಧು ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನಲ್ಲಿ ಹೊರ ನಡೆದ ಭಾರತದ ನಾಲ್ಕನೆ ಶೂಟರ್ ಆಗಿದ್ದಾರೆ. ಭಾರತಕ್ಕೆ ಈ ಬಾರಿ ಪದಕದ ಭರವಸೆ ಮೂಡಿಸಿದ್ದ ಸಿಧು ಅರ್ಹತಾ ಸುತ್ತಿನಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾದರು.
ಸಿಧು ನಾಲ್ಕು ಸಿರೀಸ್‌ನಲ್ಲಿ 94, 95, 96, 95 ಅಂಕ ಗಳಿಸಿದರು.ರಶ್ಯದ ವಿಟಲಿನಾ(390 ಅಂಕ) ಹಾಗೂ ಎಕಟೆರಿನಾ ಕಾರ್ಶುನೊ(387 ಅಂಕ) ಮೊದಲ ಹಾಗೂ 2ನೆ ಸ್ಥಾನ ಪಡೆದರು. ಸಿಧು ನಿರ್ಗಮನದೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ಸೋಲಿನ ಓಟ ಮುಂದುವರಿದಿದೆ.
ಶನಿವಾರ ನಡೆದ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅಪೂರ್ವಿ ಚಾಂಡೇಲಾ ಹಾಗೂ ಅಯೊನಿಕಾ ಪೌಲ್ ಕ್ರಮವಾಗಿ 34 ಹಾಗೂ 43ನೆ ಸ್ಥಾನ ಪಡೆದು ಅರ್ಹತೆ ಪಡೆಯಲು ವಿಫಲರಾಗಿದ್ದರು. ಪುರುಷರ 10 ಮಿ. ಏರ್ ಪಿಸ್ತೂಲ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗುರುಪ್ರೀತ್ ಸಿಂಗ್ 20ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇನ್ನೋರ್ವ ಶೂಟರ್ ಜಿತು ರಾಯ್ ಅರ್ಹತಾ ಸುತ್ತಿನಲ್ಲಿ 6ನೆ ಸ್ಥಾನ ಪಡೆದು ಫೈನಲ್‌ಗೆ ತಲುಪಿದ್ದರೂ ಫೈನಲ್‌ನಲ್ಲಿ 8ನೆ ಸ್ಥಾನ ಪಡೆದಿದ್ದರು.