ಮೊದಲ ಸುತ್ತಿನಲ್ಲಿ ಸೋತ ಪೇಸ್‌ಗೆ 2020ರ ಒಲಿಂಪಿಕ್ಸ್ ಕನಸು!
ಹೊಸದಿಲ್ಲಿ, ಆ.7: ನನ್ನನ್ನು ವಿನಾಕಾರಣ ಗುರಿ ಮಾಡುತ್ತಿರುವುದು ಸರಿಯಲ್ಲ. ರಿಯೋ ಒಲಿಂಪಿಕ್ಸ್‌ನ ಕ್ರೀಡಾಗ್ರಾಮದಲ್ಲಿ ರೋಹನ್ ಬೋಪಣ್ಣರೊಂದಿಗೆ ಕೊಠಡಿ ಹಂಚಿಕೊಳ್ಳಲು ಬಯಸಿರಲಿಲ್ಲ ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ. ಇದೀಗ ನಾನು 2020ರ ಟೋಕಿಯೊ ಒಲಿಂಪಿಕ್ಸ್‌ನ್ನು ಎದುರು ನೋಡುತ್ತಿರುವೆ ಎಂದು ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೇಳಿದ್ಧಾರೆ.
ಪೇಸ್ ಅವರು ಬೋಪಣ್ಣರೊಂದಿಗೆ ರಿಯೋ ಗೇಮ್ಸ್‌ನ ಡಬಲ್ಸ್ ಪಂದ್ಯದ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಪೇಸ್ ನಿರಾಸೆಯಿಂದ ಗೇಮ್ಸ್‌ನಿಂದ ನಿರ್ಗಮಿಸಿದ್ದಾರೆ.
ರಿಯೋದ ಕ್ರೀಡಾ ಗ್ರಾಮದಲ್ಲಿ ತನಗೆ ನೆಲಸಲು ಇಷ್ಟವಿರಲಿಲ್ಲ. ಬೋಪಣ್ಣರೊಂದಿಗೆ ರೂಮ್ ಹಂಚಿಕೊಳ್ಳಲು ಬಯಸಿರಲಿಲ್ಲ ಎಂಬ ವರದಿಯನ್ನು ಪೇಸ್ ನಿರಾಕರಿಸಿದ್ದಾರೆ.
ಮಾಧ್ಯಮಗಳು ವೈಯಕ್ತಿಕವಾಗಿ ಗುರಿ ಮಾಡುತ್ತಿರುವುದಕ್ಕೆ ತುಂಬಾ ಬೇಸರವಾಗಿದೆ. ಜನರು ತಪ್ಪು ಮಾಹಿತಿಯನ್ನು ಬರೆಯುವುದು ಸರಿಯಲ್ಲ.
ನಾಲ್ಕು ವರ್ಷಗಳ ಬಳಿಕ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಗಂಭೀರವಾಗಿ ಯೋಚಿಸುತ್ತಿರುವೆ ಎಂದು 18 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಪೇಸ್ ಹೇಳಿದ್ದಾರೆ.