ವೇಟ್‌ಲಿಫ್ಟಿಂಗ್: ಸ್ಪರ್ಧೆ ಪೂರ್ಣಗೊಳಿಸಲು ಮಿರಾಬಾಯಿ ಚಾನು ವಿಫಲ
ರಿಯೋ ಡಿ ಜನೈರೊ, ಆ.7: ಭಾರತದ ಸೈಖೋಮ್ ಮಿರಾಬಾಯಿ ಚಾನು ರಿಯೋ ಒಲಿಂಪಿಕ್ಸ್‌ನ ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.
ಶನಿವಾರ ರಾತ್ರಿ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ಲೀನ್ ಹಾಗೂ ಜರ್ಕ್ ವಿಭಾಗದ ಮೂರು ಪ್ರಯತ್ನದಲ್ಲೂ ಭಾರ ಎತ್ತಲು ವಿಫಲರಾದರು.
ಸ್ಪರ್ಧೆಯಲ್ಲಿದ್ದ 12 ಲಿಫ್ಟರ್‌ಗಳ ಪೈಕಿ ಚಾನು ಸಹಿತ ಇಬ್ಬರು ಲಿಫ್ಟರ್‌ಗಳು ಸ್ಪರ್ಧೆಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಮಿರಾಬಾಯಿ ಕ್ಲೀನ್ ಹಾಗೂ ಜರ್ಕ್‌ನಲ್ಲಿ 104 ಕೆಜಿ ಭಾರ ಎತ್ತಲು ಮೊದಲ ಯತ್ನದಲ್ಲಿ ವಿಫಲರಾದರು. ಎರಡು ಹಾಗೂ ಮೂರನೆ ಯತ್ನದಲ್ಲೂ ಭಾರ ಎತ್ತಲು ಚಾನುಗೆ ಸಾಧ್ಯವಾಗಲೇ ಇಲ್ಲ. ಕ್ಲೀನ್ ಹಾಗೂ ಜರ್ಕ್‌ನಲ್ಲಿ ಚಾನು ಜೀವನಶ್ರೇಷ್ಠ ಸಾಧನೆ 108 ಕೆಜಿ.
ಡಬಲ್ಸ್: ಸಾನಿಯಾ-ಪ್ರಾರ್ಥನಾಗೆ ಸೋಲು
ರಿಯೋ ಡಿ ಜನೈರೊ, ಆ.7: ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಝಾ ರಿಯೋ ಗೇಮ್ಸ್‌ನ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಪ್ರಾರ್ಥನಾ ಥಾಂಬರೆ ಜೊತೆಗೂಡಿ ಆಡಿದ್ದರೂ, ಮೊದಲ ಸುತ್ತಿನಲ್ಲೇ ಸೋತು ನಿರಾಶೆಗೊಳಿಸಿದ್ದಾರೆ.
ಶನಿವಾರ ಇಲ್ಲಿ 2 ಗಂಟೆ, 44 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ-ಪ್ರಾರ್ಥನಾ ಜೋಡಿ ಚೀನಾದ ಜೋಡಿ ಶುಐ ಝಾಂಗ್ ಹಾಗೂ ಶುಐ ಪೆಂಗ್ ವಿರುದ್ಧ 7-6(8/6), 5-7, 7-5 ಸೆಟ್‌ಗಳ ಅಂತರದಿಂದ ಸೋತಿದೆ.
ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲೇ ಸೋತು ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ಟೆನಿಸ್‌ನಲ್ಲಿ ಭಾರತದ ಸವಾಲು ಸಾನಿಯಾ ಹಾಗೂ ರೋಹನ್ ಬೋಪಣ್ಣರನ್ನು ಅವಲಂಭಿಸಿದೆ. ಈ ಇಬ್ಬರು ಮಿಶ್ರ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಟೇಬಲ್ ಟೆನಿಸ್: ಶರತ್‌ಗೆ ಸೋಲು
ರಿಯೋ ಡಿ ಜನೈರೊ, ಆ.7: ಭಾರತದ ಹಿರಿಯ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ 34ರ ಹರೆಯದ ಶರತ್ ರೋಮಾನಿಯದ ಅಡ್ರಿಯನ್ ಕ್ರಿಸನ್ ವಿರುದ್ಧ 1-4(8-11, 12-14, 11-9, 6-11, 8-11) ಅಂತರದಿಂದ ಶರಣಾದರು. ಶರತ್ ಮೂರನೆ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡರೂ ಅವಕಾಶ ಸದುಪಯೋಗಪಡಿಸಿಕೊಳ್ಳಲು ವಿಫಲರಾದರು.
ವಿಶ್ವದ ನಂ.73ನೆ ಆಟಗಾರ ಶರತ್ ಎಲ್ಲ ಐದು ಪಂದ್ಯಗಳಲ್ಲಿ ಕಠಿಣ ಹೋರಾಟ ನೀಡಿದ್ದರೂ ರೊಮಾನಿಯದ 36ರ ಹರೆಯದ ಕ್ರಿಸನ್ ಮೇಲುಗೈ ಸಾಧಿಸಲು ಯಶಸ್ವಿಯಾದರು.