ಬ್ರಿಟನ್ "ಗ್ರೇಟ್" ಆಟಕ್ಕೆ ಶರಣಾದ ಭಾರತ ಮಹಿಳಾ ಹಾಕಿ ತಂಡ ಮೂರನೇ ದಿನವೂ ಸೊನ್ನೆಯಲ್ಲೇ ಉಳಿದ ಭಾರತ!
ರಿಯೊ ಡಿ ಜನೈರೊ: ವಿಶ್ವದ ಅತಿದೊಡ್ಡ ಕ್ರೀಡಾಕೂಟದ ಮೂರನೇ ದಿನವೂ ಭಾರತದ ಪದಕ ಬರ ನೀಗಿಲ್ಲ. ಭರವಸೆಯ ಶೂಟರ್‌ಗಳು ಗುರಿ ತಪ್ಪಿದರು. ಅಭಿನವ ಬಿಂದ್ರಾ ಏರ್‌ರೈಫಲ್‌ನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಒಲಿಂಪಿಕ್ಸ್ ಅಭಿಯಾನ ಮುಗಿಸಿದರು. ಭಾರತದ ಮಹಿಳಾ ಹಾಕಿ ತಂಡ ಬ್ರಿಟನ್‌ನ "ಗ್ರೇಟ್" ಆಟಕ್ಕೆ 3-0 ಗೋಲುಗಳಿಂದ ಶರಣಾಯಿತು.
ಪಂದ್ಯದುದ್ದಕ್ಕೂ ಅತ್ಯುತ್ತಮ ನಿರ್ವಹಣೆ ತೋರಿದ ಬ್ರಿಟನ್ ಆಟಗಾರ್ತಿಯರಿಗೆ ಸಹಜ ಯಶಸ್ಸು ದೊರಕಿತು. ಮೂರನೇ ದಿನದ ಇತರ ಸ್ಪರ್ಧೆಗಳಲ್ಲಿ ಪುರುಷರ ವಿಭಾಗದ ಟ್ರ್ಯಾಪ್ ಶೂಟಿಂಗ್‌ನಲ್ಲಿ ಮನ್ವಜಿತ್ ಸಿಂಗ್ ಸಂಧು 16ನೇ ಸ್ಥಾನ ಪಡೆದರೆ, ಭರವಸೆಯ ಬಿಲ್ಗಾರ್ತಿ ಲಕ್ಷ್ಮಿರಾಣಿ ಮಜ್ಹಿ, 64 ಸುತ್ತಿನಲ್ಲೇ ಹೊರಬಿದ್ದರು. ಪುರುಷರ ಹಾಕಿಯಲ್ಲಿ ಕೊನೆಕ್ಷಣದಲ್ಲಿ ಜರ್ಮನಿಗೆ ಗೆಲುವು ಬಿಟ್ಟುಕೊಟ್ಟ ಭಾರತ 1-2 ಅಂತರದ ಸೋಲು ಕಂಡದ್ದು ದಿನದ ಹೈಲೈಟ್ಸ್.
ಪುರುಷರ 200 ಮೀಟರ್ ಬಟರ್‌ಫ್ಲೈ ಹೀಟ್ಸ್‌ನಲ್ಲಿ ಸಾಜನ್‌ಪ್ರಕಾಶ್ 1:59.37 ಸೆಕೆಂಡ್‌ಗಳೊಂದಿಗೆ ಗುರಿ ಸೇರಿ, ಹೀಟ್ಸ್‌ನಿಂದ ಹೊರಬಿದ್ದರು. 200 ಮಹಿಳೆಯರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಶಿವಾನಿ ಕಠಾರಿಯಾ ಕೂಡಾ ಸೋಲು ಅನುಭವಿಸಿದರು.