×
Ad

ರಿಯೋ ಒಲಿಂಪಿಕ್ಸ್ ನಲ್ಲಿ ಸರಣಿ ಅಫಘಾತ; ಇಬ್ಬರು ಅಥ್ಲೀಟ್ ಗಳಿಗೆ ಗಾಯ

Update: 2016-08-09 10:42 IST

ರಿಯೋ ಡಿ ಜನೈರೊ, ಆ.9: ಫ್ರಾನ್ಸ್‌ ನ ಜಿಮ್ನಾಸ್ಟಿಕ್‌ ಪಟು ಸಮೀರ್‌ ಐತ್‌ ಸಯೀದ್ ಕಾಲು ಮುರಿತದಿಂದಾಗಿ ಕೂಟದಿಂದ ಹೊರಬಿದ್ದ ಬೆನ್ನಿಗೆ ಇನ್ನಿಬ್ಬರು ಅಥ್ಲೀಟ್‌ ಗಳು ಗಾಯಗೊಂಡು ರಿಯೋ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದಾರೆ.  ಬ್ರಿಟನ್ ಮಹಿಳಾ ಜಿಮ್ನಾಸ್ಟ್ ಎಲ್ಲಿ ಡೌನಿ ಮತ್ತು ಹಾಲೆಂಡ್ ನ  ಮಹಿಳಾ ಸೈಕ್ಲಿಸ್ಟ್ ಅನ್ನೆಮೀಕ್ ವಾನ್ ಲ್ಯೂಟೆನ್  ಒಲಿಂಪಿಕ್ಸ್‌ ಕೂಟದ ಮೂರನೆ ದಿನವಾಗಿರುವ ಸೋಮವಾರ ಗಾಯಗೊಂಡು ಕೂಟದಿಂದ ಹೊರ ನಡೆದರು.
 ಗ್ರೇಟ್‌ ಬ್ರಿಟನ್ ನ ಮಹಿಳಾ ಜಿಮ್ನಾಸ್ಟ್​ ಏಲ್ಲಿ ಡೌನಿಗೆ  ಗಾಯ:  ಇದೇ ಮೊದಲ ಬಾರಿ ಒಲಿಂಪಿಕ್ಸ್‌ ನಲ್ಲಿ ಪದಕದ ಬೇಟೆಗೆ ಹೊರಟಿದ್ದ ಯೂತ್ ಒಲಿಂಪಿಕ್ಸ್ ಪದಕ ವಿಜೇತೆ ಗ್ರೇಟ್‌ ಬ್ರಿಟನ್ ನ ಹದಿನೇಳರ ಹರೆಯದ ಏಲ್ಲಿ ಡೌನಿ  ಅವರು ವಾಲ್ಟ್ ಜಿಮ್ನಾಸ್ಟಿಕ್ಸ್ ನಲ್ಲಿ ಸ್ಪರ್ಧಿಸುತ್ತಿದ್ದಾಗ  ಆಯ ತಪ್ಪಿ ಕೆಳಕ್ಕೆ ಬಿದ್ದ ಪರಿಣಾಮವಾಗಿ ಅವರ   ಕುತ್ತಿಗೆಯ ಭಾಗಕ್ಕೆ ಗಾಯವಾಗಿದೆ.
ಡೌನಿ ಅವರು ಅರ್ಹತಾ ಸುತ್ತಿನ ಅನ್​ಈವನ್ ಬಾರ್ಸ್ ಮತ್ತು ಬ್ಯಾಲೆನ್ಸ್ ಬೀಮ್ ಸ್ಪರ್ಧೆಯನ್ನು ಯಶಸ್ವಿಯಾಗಿ ಕೊನೆಗೊಳಿಸಿದ್ದರು.  3ನೇ ಸ್ಪರ್ಧೆ ಫ್ಲೋರ್​ನಲ್ಲಿ ಜಂಪ್ ಮಾಡಿ ಕೆಳಗಿಳಿಯುತ್ತಿದ್ದ  ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದರು.  ಬಳಿಕ  ಸ್ಪರ್ಧೆಯನ್ನು ಮುಗಿಸುವ   ಪ್ರಯತ್ನ ಮಾಡಿದರೂ ಸಾಧ್ಯವಾಗದೆ  ಕುತ್ತಿಗೆಗೆ ಆಗಿದ್ದ ಗಾಯದಿಂದಾಗಿ ಒದ್ದಾಡಿದರು. ಅವರ ಪದಕದ ಕನಸು ಭಗ್ನಗೊಂಡಿತು. ವೈದ್ಯಕೀಯ ತಂಡ ಆಗಮಿಸಿ ಆಗಮಿಸಿ ಅವರನ್ನು ಚಿಕಿತ್ಸೆಗಾಗಿ ಕರೆದೊಯ್ದರು.
ಸೈಕ್ಲಿಸ್ಟ್ ಅನ್ನೆಮೀಕ್ ವಾನ್ ಲ್ಯೂಟೆನ್ ಗೆ  ತಪ್ಪಿದ ಚಿನ್ನ
ಹಾಲೆಂಡ್  ಸೈಕ್ಲಿಸ್ಟ್  33 ರ ಹರೆಯದ   ಅನ್ನೆಮೀಕ್ ವಾನ್ ಲ್ಯೂಟೆನ್ ಸ್ಪರ್ಧೆ ಮುಗಿಸಲು 10 ಕಿ.ಮೀ. ದೂರವಿದ್ದಾಗ, ರಸ್ತೆಯ ತಿರುವಿನಲ್ಲಿ ಅವರ ಸೈಕಲ್  ನಿಯಂತ್ರಣ ತಪ್ಪಿ  ರಸ್ತೆ ಬದಿಯ  ಚರಂಡಿಗೆ  ಬಿತ್ತು. ಪರಿಣಾಮವಾಗಿ  ಅನ್ನೆಮೀಕ್ ತಲೆಗೆ ಪೆಟ್ಟಾಯಿತು. ಗಾಯದಿಂದ ಪ್ರಜ್ಞೆಯನ್ನೇ ಕಳೆದುಕೊಂಡರು. ಅನ್ನೇಮೀಕ್  ಸ್ಪರ್ಧೆ ಅಲ್ಲಿಗೆ ಕೊನೆಗೊಂಡಿತು. ಆದರೆ ಅವರ ತಂಡದ ಅನಾ ವಾನ್ ಡೆರ್ ಬ್ರಿಗೆನ್  ಚಿನ್ನ ಗೆದ್ದರು. 
ರಿಯೊ ಒಲಿಂಪಿಕ್‌ ಕೂಟದಲ್ಲಿ ಶನಿವಾರ ಸಂಭವಿಸಿದ  ಅಪಘಾತದಲ್ಲಿ  ಫ್ರಾನ್ಸ್‌ನ ಜಿಮ್ನಾಸ್ಟಿಕ್ಸ್‌ ಸ್ಪರ್ಧಿ ಸಮೀರ್‌ ಐತ್‌ ಸಯೀದ್‌ ಅರ್ಹತಾ ಸುತ್ತಿನ ಪ್ರದರ್ಶನದ ವೇಳೆ ಕಾಲು ಮುರಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News