×
Ad

ಮದ್ಯ ಸೇವಿಸಿದ ಡಚ್ ಜಿಮ್ನಾಸ್ಟ್ ಅಮಾನತು

Update: 2016-08-09 19:05 IST

 ರಿಯೋ ಡಿ ಜನೈರೊ, ಆ.9: ಒಲಿಂಪಿಕ್ಸ್‌ನ ಪುರುಷರ ಜಿಮ್ನಾಸ್ಟಿಕ್ ರಿಂಗ್ಸ್ ಇವೆಂಟ್‌ನ ಅರ್ಹತಾ ಸುತ್ತಿನ ಸ್ಪರ್ಧೆಯ ಬಳಿಕ ಮದ್ಯ ಸೇವಿಸುವ ಮೂಲಕ ನಿಯಮವನ್ನು ಉಲ್ಲಂಘಿಸಿದ ಹಾಲೆಂಡ್‌ನ ಜಿಮ್ನಾಸ್ಟಿಕ್ ಪಟು ಯೂರಿ ವ್ಯಾನ್ ಗೆಲ್ಡೆರ್ ಅವರನ್ನು ಕೂಟದಿಂದ ಅಮಾನತುಗೊಳಿಸಲಾಗಿದೆ.
33ರ ಹರೆಯದ ಯೂರಿ ಶನಿವಾರ ರಾತ್ರಿ ಒಲಿಂಪಿಕ್ಸ್ ಗ್ರಾಮದಿಂದ ಸಂಜೆ ಹೊರಟು ರಾತ್ರಿ ಪೂರ್ತಿ ಗುಂಡಿನ ಪಾರ್ಟಿಯಲ್ಲಿ ಕಳೆದಿದ್ದರು. ಬೆಳಗ್ಗಿನ ಜಾವ ವಾಪಸಾಗುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದರು. ‘‘ ಯೂರಿ ಪಾಲಿಗೆ ಇದೊಂದು ಕರಾಳ ಘಟನೆ. ಆದರೆ ಅವರ ಇಂತಹ ನಡವಳಿಕೆ ಸ್ವೀಕಾರಕ್ಕೆ ಯೋಗ್ಯವಲ್ಲ ’’ ಎಂದು ಹೇಳಿಕೆಯಲ್ಲಿ ತಿಳಿಸಿರುವ ಹಾಲೆಂಡ್ ತಂಡದ ಚೀಫ್ ಡಿ ಮಿಷನ್ ವೌರಿಟ್ಸ್ ಹೆನ್ರಿಕ್ಸ್ ಅಭಿಪ್ರಾಯಪಟ್ಟಿದ್ದಾರೆ. ‘‘ ಕ್ರೀಡಾ ನಿಯಮ ಅತ್ಯಂತ ಕಠಿಣ. ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ’’ ಎಂದು ಹೇಳಿದ್ದಾರೆ.
 ವ್ಯಾನ್ ಗೆಲ್ಡೆರ್ 2005ರಲ್ಲಿ ಜಿಮ್ನಾಸ್ಟಿಕ್ ರಿಂಗ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಅವರು ಅಮಾನತುಗೊಂಡಿರುವುದು ಇದೇ ಮೊದಲಲ್ಲ. 2009ರಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್‌ಗಿಂತ ಮೂರು ದಿನ ಮೊದಲು ಮಾದಕ ಪದಾರ್ಥ ಕೊಕೈನ್ ಸೇವಿಸಿದ ಆರೋಪದಲ್ಲಿ ಅಮಾನತುಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News