ಒಲಿಂಪಿಕ್ಸ್ ಪುರುಷರ ಹಾಕಿ: ಅರ್ಜೆಂಟೀನ ವಿರುದ್ಧ ಭಾರತಕ್ಕೆ ಜಯ

Update: 2016-08-09 18:10 GMT

   ರಿಯೋ ಡಿ ಜನೈರೊ, ಆ.9: ರಿಯೋ ಒಲಿಂಪಿಕ್ಸ್‌ನ ಬಿ ಗುಂಪಿನ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಬಲಿಷ್ಠ ಅರ್ಜೆಂಟೀನದ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿದೆ. ಒಲಿಂಪಿಕ್ ಗೇಮ್ಸ್‌ನಲ್ಲಿ ಎರಡನೆ ಗೆಲುವು ಪಡೆದಿರುವ ಭಾರತ ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೆ ಸ್ಥಾನ ಪಡೆಯುವುದರೊಂದಿಗೆ ಕ್ವಾರ್ಟರ್‌ಫೈನಲ್‌ಗೆ ತಲುಪುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ.

ಇಲ್ಲಿನ ಒಲಿಂಪಿಕ್ಸ್ ಹಾಕಿ ಸೆಂಟರ್‌ನಲ್ಲಿ ಮಂಗಳವಾರ ನಡೆದ ತನ್ನ ಮೂರನೆ ಗ್ರೂಪ್ ಪಂದ್ಯದಲ್ಲಿ ಮಣಿಪುರದ ಆಟಗಾರರಾದ ಚಿಂಗ್ಲೆನ್‌ಸನಾ ಹಾಗೂ ಕೋಥಾಜಿತ್ ಸಿಂಗ್ ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಅರ್ಜೆಂಟೀನದ ಪರ ಗೊಂಝಾಲೊ ಪಿಲ್ಲೆಟ್ 49ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ಚಿಂಗ್ಲೆನ್‌ಸನಾ 8ನೆ ನಿಮಿಷದಲ್ಲಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧದಲ್ಲಿ ಭಾರತ 1-0 ಮುನ್ನಡೆಯಲ್ಲಿತ್ತು. 35ನೆ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿದ ಕೋಥಾಜಿತ್ ಭಾರತದ ಮುನ್ನಡೆಯನ್ನು 2-0ಗೇರಿಸಿದರು. 49ನೆ ನಿಮಿಷದಲ್ಲಿ ಗೊಂಝಾಲೊ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು. ಈನಡುವೆ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಮೂರು ಬಾರಿ ಗೋಲನ್ನು ಉಳಿಸಿದರು.

ಕನ್ನಡಿಗ ವಿಆರ್ ರಘುನಾಥ್ ನೇತೃತ್ವದಲ್ಲಿ ಭಾರತ 2009ರ ಬಳಿಕ ಮೊದಲ ಬಾರಿ ಅರ್ಜೆಂಟೀನವನ್ನು ಮಣಿಸಿದೆ. ಬಿ ಗುಂಪಿನಲ್ಲಿ 2ನೆ ಜಯ ಸಾಧಿಸಿರುವ ಭಾರತ ಒಟ್ಟು 6 ಅಂಕ ಗಳಿಸಿ 2ನೆ ಸ್ಥಾನ ತಲುಪಿದೆ. ಜರ್ಮನಿ ಮೊದಲ ಸ್ಥಾನದಲ್ಲಿದೆ. ಭಾರತ ಮುಂದಿನ ಪಂದ್ಯದಲ್ಲಿ ಹಾಲೆಂಡ್‌ನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News