ಹಾಲಿ ಚಾಂಪಿಯನ್ ಸೆರೆನಾ ಸವಾಲು ಅಂತ್ಯ

Update: 2016-08-10 18:11 GMT

ರಿಯೋ ಡಿ ಜನೈರೊ, ಆ.10: ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಸೋಲುವುದರೊಂದಿಗೆ ಒಲಿಂಪಿಕ್ ಗೇಮ್ಸ್‌ನಿಂದ ಹೊರ ನಡೆದಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಸೆರೆನಾ ಉಕ್ರೇನ್‌ನ ಎಲಿನಾ ವಿರುದ್ಧ 6-4, 6-3 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಈ ಸೋಲಿನೊಂದಿಗೆ ಐದನೆ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವ ಸೆರೆನಾರ ಕನಸುಭಗ್ನಗೊಂಡಿದೆ. ಸೆರೆನಾ ಹಾಗೂ ಅವರ ಸಹೋದರಿ ವೀನಸ್ ವಿಲಿಯಮ್ಸ್ ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನಲ್ಲೆ ಸೋತು ನಿರಾಸೆ ಮೂಡಿಸಿದ್ದರು.

 21ರ ಹರೆಯದ ಎಲಿನಾ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ.

ಸೆರೆನಾಗೆ ಮಾಂಟ್ರಿಯಲ್ ಟೂರ್ನಿಯ ವೇಳೆ ಕಾಣಿಸಿಕೊಂಡಿದ್ದ ಭುಜನೋವು ಒಲಿಂಪಿಕ್ಸ್ ಪಂದ್ಯದ ವೇಳೆಯೂ ಮರುಕಳಿಸಿತ್ತು. ಎಲಿನಾ ವಿರುದ್ಧ ಈತನಕ ಆಡಿದ್ದ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಸೆರೆನಾ ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ನಿರಂತರ ತಪ್ಪೆಸಗಿದರು.

ನಡಾಲ್‌ಗೆ ಜಯ

ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ವಿರುದ್ಧ 6-3, 6-3 ಸೆಟ್‌ಗಳ ಅಂತರದಿಂದ ಜಯ ಗಳಿಸಿದರು. ನಡಾಲ್ ಅವರು ಸೆಪ್ಪಿ ವಿರುದ್ದ ಆಡಿರುವ 8 ಪಂದ್ಯಗಳಲ್ಲಿ 7ನೆ ಜಯ ಸಾಧಿಸಿದರು.

ಎರಡನೆ ಒಲಿಂಪಿಕ್ ಪದಕದ ಮೇಲೆ ಕಣ್ಣಿಟ್ಟಿರುವ ನಡಾಲ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಗಿಲ್ಲೆಸ್ ಸಿಮೊನ್‌ರನ್ನು ಎದುರಿಸಲಿದ್ದಾರೆ.

30ರ ಹರೆಯದ ನಡಾಲ್ ಅವರು ಮಾರ್ಕ್ ಲೊಪೆಝ್ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News