×
Ad

ಫೆಲ್ಪ್ಸ್ ಗೆ ದಾಖಲೆ ಮುರಿಯುವುದೇ ದಿನಚರಿ

Update: 2016-08-11 13:48 IST

ರಿಯೋ ಡಿ ಜನೈರೋ, ಆ.11: ಪದಕಗಳ ಮೆಶಿನ್ ಎಂದೇ ಖ್ಯಾತಿವೆತ್ತ ಅಮೆರಿಕಾದ ಮೈಕೆಲ್ ಫೆಲ್ಪ್ಸ್ ಇದೀಗ 2160 ವರ್ಷಗಳಷ್ಟು ಹಳೆಯದಾದದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಗ್ರೀಸ್ ದೇಶದ ಅತಿ ದೊಡ್ಡ ಅಥ್ಲೀಟ್ ಎಂದು ಪರಿಗಣಿತನಾಗಿದ್ದ ಲಿಯೊನಿಡಾಸ್ ನ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. ಪ್ರತಿಭಾವಂತ ಓಟಗಾರನಾಗಿದ್ದ ಲಿಯೋನಿದಾಸ್ ಕ್ರಿ.ಪೂ. 164 ಹಾಗೂ 152 ನಡುವೆ12 ವೈಯಕ್ತಿಕ ಪದಕಗಳನ್ನು ಪಡೆದಿದ್ದನೆಂದು ಒಲಿಂಪಿಕ್ಸ್ ಇತಿಹಾಸಕಾರರು ಹೇಳುತ್ತಾರೆ. ಹೀಗಾಗಿದ್ದೇ ಆದಲ್ಲಿ ಮಂಗಳವಾರ ಈಜು ಸ್ಪರ್ಧೆಯಲ್ಲಿ ತಮ್ಮ  12ನೆ ವೈಯಕ್ತಿಕ ಪದಕ ಗೆದ್ದ ಫೆಲ್ಪ್ಸ್ ಲಿಯೋನಿಡಾಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತಿಹಾಸಕಾರರ ಪ್ರಕಾರ ಲಿಯೋನಿಡಾಸ್‌ ನಾಲ್ಕು ಒಲಿಂಪಿಯಾಡ್ ನಲ್ಲಿ ಒಟ್ಟು 12 ಪದಕಗಳನ್ನು ಗೆದ್ದಿದ್ದರು. ಈ ತನಕ ಒಟ್ಟು 21 ಚಿನ್ನದ ಪದಕ ಜಯಿಸಿದ ಫೆಲ್ಪ್ಸ್ ಒಟ್ಟು 25 ಪದಕಗಳನ್ನು ಪಡೆದು ಅಸಾಮಾನ್ಯ ಸಾಧನೆ ಮಾಡಿದ್ದಾರೆ.
2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅತಿ ಹೆಚ್ಚು ಎಂದರೆ ಎಂಟು ಚಿನ್ನದ ಪದಕ ಪಡೆದ ಏಕೈಕ ಅಥ್ಲೀಟ್ ಫೆಲ್ಪ್ಸ್ ಆಗಿದ್ದು, ರಿಯೋದಲ್ಲಿ ಅವರು ಇಲ್ಲಿಯ ತನಕ ಮೂರು ಚಿನ್ನ - ಒಂದು ವೈಯಕ್ತಿಕ ಹಾಗೂ ಎರಡು ರಿಲೇ ಪಂದ್ಯಗಳಲ್ಲಿ ಚಿನ್ನ ಜಯಿಸಿದ್ದಾರೆ. ಗುರುವಾರಅವರು ವೈಯಕ್ತಿಕ ವಿಭಾಗದ 200 ಮೀಟರ್ ಮೆಡ್ಲಿಯಲ್ಲಿ ಚಿನ್ನ ಗೆದ್ದರೆಂದಾದರೆ ಒಂದೇ ವಿಭಾಗದಲ್ಲಿ ನಾಲ್ಕು ಒಲಿಂಪಿಕ್ಸ್ ನಲ್ಲಿ ಸತತವಾಗಿ ಚಿನ್ನ ಗೆದ್ದ ಅಥ್ಲೀಟ್ ಎಂದು ಪರಿಗಣಿತರಾಗುತ್ತಾರೆ.
ಮಂಗಳವಾರ ಅವರು 200 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ ಚಿನ್ನ ಪಡೆದಾಗ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಪಡೆದ ಅತ್ಯಂತ ಹಿರಿಯ ಈಜುಗಾರನೆಂಬ(31 ವರ್ಷ 40 ದಿನಗಳು) ಪ್ರಶಂಸೆಗೆ ಪಾತ್ರರಾದರು.
ಫೆಲ್ಪ್ಸ್ ಅವರನ್ನು ಒಂದು ರಾಷ್ಟ್ರವೆಂದು ಪರಿಗಣಿಸಿದರೆ ಅವರು ಪದಕಗಳ ಪಟ್ಟಿಯಲ್ಲಿ 52ನೇ ಸ್ಥಾನ ಹಾಗೂ ಚಿನ್ನ ಪದಕಗಳ ಪಟ್ಟಿಯಲ್ಲಿ ಟಾಪ್ 40ರಲ್ಲಿ ಸ್ಥಾನ ಪಡೆಯುತ್ತಾರೆ.
ಆದರೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತ 1920ರಿಂದ ಪ್ರತಿಯೊಂದು ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದರೂ ಇಲ್ಲಿಯ ತನಕ ಕೇವಲ 9 ಚಿನ್ನದ ಪದಕಗಳನ್ನು ಮಾತ್ರ ಹಾಗೂ ಈಜು ವಿಭಾಗದಲ್ಲಿ ಒಂದೇ ಒಂದು ಪದಕ ಗೆದ್ದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News