×
Ad

ಪಾಕ್ ಮಾಜಿ ಕ್ರಿಕೆಟಿಗ ಹನೀಫ್ ಹೃದಯ ಬಡಿತ 6 ನಿಮಿಷ ನಿಂತರೂ, ಮತ್ತೆ ಚೇತರಿಸಿಕೊಂಡರು..!

Update: 2016-08-11 19:38 IST

ಕರಾಚಿ, ಆ.11: ಆಗಾ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹನೀಫ್ ಮುಹಮ್ಮದ್ ಅವರ ಹೃದಯ ಬಡಿತ ಆರು ನಿಮಿಷಗಳ ಕಾಲ ನಿಂತರೂ ಬಳಿಕ ಚೇತರಿಸಿಕೊಂಡ ಘಟನೆ ಇಂದು ನಡೆದಿದೆ.
 ವಯೋ ಸಂಬಂಧಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ಹನೀಫ್ ಅವರು ತೀವ್ರ ನಿಗಾ ವಿಭಾಗದಲ್ಲಿ ಹಲವು ದಿನಗಳಿಂದ ಚಿಕತ್ಸೆ ಪಡೆಯುತ್ತಿದ್ದರು. ಆದರೆ ದಿಢೀರನೆ ಅವರ ಆರೋಗ್ಯ ಹದೆಗೆಟ್ಟು,ಉಸಿರಾಟದ ಕ್ರಿಯೆ ನಿಂತಿತು. ತಕ್ಷಣ ಹನೀಫ್ ಅವರ ಮಗ ಶುಐಬ್ ತಂದೆ ನಿಧನರಾಗಿರುವುದಾಗಿ ವಿವಿಧ ಟಿವಿ ಚಾನಲ್‌ಗಳಿಗೆ ಮಾಹಿತಿ ನೀಡಿದರು.
  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನಡೆಸಿದ ಪ್ರಯತ್ನದಲ್ಲಿ ಆರು ನಿಮಿಷಗಳ ಬಳಿಕ ಹನೀಫ್ ಅವರ ದೇಹದಲ್ಲಿ ಉಸಿರಾಟ ಕ್ರಿಯೆ ಕಾಣಿಸಿಕೊಂಡಿತು. ‘‘ ತಂದೆಯ ಹೃದಯ ಬಡಿತ ಆರು ನಿಮಿಷಗಳ ಕಾಲ ನಿಂತಿತು. ವೈದ್ಯರು ನಡೆಸಿದ ಪ್ರಯತ್ನದಲ್ಲಿ ಮತ್ತೆ ಉಸಿರಾಟ ಕಾಣಿಸಿಕೊಂಡಿತು ’’ ಎಂದು ಶುಐಬ್ ಮಾಹಿತಿ ನೀಡಿದರು.
 ‘‘ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮತ್ತು ಬೆಂಬಲಿಗರ ಪ್ರಾರ್ಥನೆಯ ಫಲವಾಗಿ ದೇವರು ಅವರಿಗೆ ಎರಡನೆ ಅವಕಾಶ ನೀಡಿದರು’’ ಎಂದು ಶುಐಬ್ ಅಭಿಪ್ರಾಯಪಟ್ಟಿದ್ದಾರೆ.
  ‘‘ ನಾನು ಆಸ್ಪತ್ರೆ ತಲುಪುವ ಹೊತ್ತಿಗೆ ಅಲ್ಲಿದ್ದ ಸಂಬಂಧಿಕರು ತಂದೆ ನಿಧನರಾಗಿರುವುದಾಗಿ ಮಾಹಿತಿ ನೀಡಿದರು. ನನಗೆ ಆಘಾತವಾಗಿ ಅಳಲು ಆರಂಭಿಸಿದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ವೈದ್ಯರು ನಡೆಸಿದ ಪ್ರಯತ್ನದಲ್ಲಿ ತಂದೆಯ ದೇಹದಲ್ಲಿ ಉಸಿರಾಟ ಕಾಣಿಸಿಕೊಂಡಿತು’’ ಎಂದು ಶುಐಬ್ ಹೇಳಿದರು.
  ‘‘ ಹನೀಫ್ ಮುಹಮ್ಮದ್ ಬದುಕಿದ್ದಾರೆ. ಸಂಕೀರ್ಣವಾದ ಉಸಿರಾಟದ ಸಮಸ್ಯೆಯಿಂದಾಗಿ ಜುಲೈ 30ರಂದು ಆಸ್ಪತ್ರೆಗೆ ದಾಖಲಾಗಿದ್ದ ಹನೀಫ್ ಮುಹಮ್ಮದ್ ಅವರಿಗೆ ಸಾಧ್ಯವಿರುವ ಎಲ್ಲ ಚಿಕಿತ್ಸೆ ನೀಡಲಾಗುತ್ತಿದೆ ’’ ಎಂದು ಆಸ್ಪತ್ರೆಯ ವಕ್ತಾರರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
 81ರ ಹರೆಯದ ಹನೀಫ್ ಮುಹಮ್ಮದ್ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ 2013ರಲ್ಲಿ ಶ್ವಾಸ ಕೋಶದ ಕ್ಯಾನ್ಸರ್ ಇರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಅವರು ಲಂಡನ್‌ಗೆ ತೆರಳಿ ಯಶಸ್ವಿ ಚಿಕಿತ್ಸೆಯ ಬಳಿಕ ಮನೆಗೆ ವಾಪಸಾಗಿದ್ದರು.
  ಹನೀಫ್ ಮುಹಮ್ಮದ್ 1954-55ರಲ್ಲಿ ಭಾರತಕ್ಕೆ ಮೊದಲ ಬಾರಿ ಪ್ರವಾಸ ಕೈಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. 55 ಟೆಸ್ಟ್‌ಗಳನ್ನು ಆಡಿರುವ ಅವರು 1957-58ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ 337ರನ್ ದಾಖಲಿಸಿದ್ದರು.ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸುಮಾರು 40 ವರ್ಷಗಳ ದಾಖಲೆಯಾಗಿ ಉಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News