ಲಿಟ್ಲ್ ಮಾಸ್ಟರ್ ಖ್ಯಾತಿಯ ಪಾಕ್‌ನ ಮಾಜಿ ಕ್ರಿಕೆಟಿಗ ಹನೀಫ್ ಮುಹಮ್ಮದ್ ನಿಧನ
ಕರಾಚಿ, ಆ.11: ಒರ್ಜಿನಲ್ 'ಲಿಟ್ಲ್ ಮಾಸ್ಟರ್' ಖ್ಯಾತಿಯ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹನೀಫ್ ಮುಹಮ್ಮದ್(81) ಇಂದು ನಿಧನರಾದರು.
ವಯೋ ಸಂಬಂಧಿ ಮತ್ತು ಶ್ವಾಸ ಕೋಶದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹನೀಫ್ ಮುಹಮ್ಮದ್ ಅವರು ಜುಲೈ 30ರಂದು ಕರಾಚಿಯ ಆಗಾ ಖಾನ್ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಹನೀಫ್ ಮುಹಮ್ಮದ್ 1954-55ರಲ್ಲಿ ಭಾರತಕ್ಕೆ ಮೊದಲ ಬಾರಿ ಪ್ರವಾಸ ಕೈಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. 55 ಟೆಸ್ಟ್‌ಗಳನ್ನು ಆಡಿರುವ ಅವರು 1957-58ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ 337ರನ್ ದಾಖಲಿಸಿದ್ದರು. ಈ ಟೆಸ್ಟ್‌ನಲ್ಲಿ ಅವರು 970 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ್ದರು.ಇದು ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ನಡೆಸಿದ ಅಪೂರ್ವ ದಾಖಲೆಯಾಗಿದೆ.
ಹನೀಫ್ ಮುಹಮ್ಮದ್ 55 ಟೆಸ್ಟ್‌ಗಳಲ್ಲಿ ಅವರು 12 ಶತಕ ಮತ್ತು 15 ಅರ್ಧಶತಕಗಳನ್ನು ಒಳಗೊಂಡ 3915 ರನ್ ದಾಖಲಿಸಿದ್ದರು. 1 ವಿಕೆಟ್ ಪಡೆದಿದ್ದರು.
238 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 55 ಶತಕ ಮತ್ತು 66 ಅರ್ಧಶತಕಗಳನ್ನು ಒಳಗೊಂಡ 17,059 ರನ್ ಮತ್ತು 53 ವಿಕೆಟ್ ಸಂಪಾದಿಸಿದ್ದರು.