ರಿಯೋ ಗೇಮ್ಸ್: ಭಾರತದ ಪುರುಷರ ಹಾಕಿ ತಂಡಕ್ಕೆ ಸೋಲು
Update: 2016-08-11 20:19 IST
ರಿಯೋ ಡಿ ಜನೈರೊ, ಆ.11: ಭಾರತದ ಪುರುಷರ ಹಾಕಿ ತಂಡ ರಿಯೋ ಒಲಿಂಪಿಕ್ಸ್‌ನ ‘ಬಿ’ ಗುಂಪಿನ ತನ್ನ ನಾಲ್ಕನೆ ಪಂದ್ಯದಲ್ಲಿ ಹಾಲೆಂಡ್‌ನ ವಿರುದ್ಧ ಶರಣಾಗಿದೆ.
ಗುರುವಾರ ಇಲ್ಲಿ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಕೊನೆಯ ಕ್ಷಣದಲ್ಲಿ ಸತತ ಐದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದಿದ್ದರೂ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. 2-1 ಅಂತರದಿಂದ ಜಯ ಸಾಧಿಸಿರುವ ಹಾಲೆಂಡ್ ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.
ಭಾರತದ ಪರ ವಿ.ಆರ್. ರಘುನಾಥ್ ಏಕೈಕ ಗೋಲು ಬಾರಿಸಿದರು. ಕನ್ನಡಿಗ ರಘುನಾಥ್ ಗೇಮ್ಸ್‌ನಲ್ಲಿ ಬಾರಿಸಿದ ಎರಡನೆ ಗೋಲು ಇದಾಗಿದೆ. ಭಾರತ ತಂಡ ಹಾಲೆಂಡ್ ವಿರುದ್ಧ ಸೋತಿದ್ದರೂ ಕ್ವಾರ್ಟರ್‌ಫೈನಲ್ ತಲುಪುವ ಅವಕಾಶ ಇನ್ನೂ ಜೀವಂತವಾಗಿದೆ.
‘ಬಿ’ ಗುಂಪಿನಲ್ಲಿ ಜರ್ಮನಿ ಹಾಗೂ ಹಾಲೆಂಡ್ ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ತಲುಪಿವೆ.