×
Ad

ಒಲಿಂಪಿಕ್ಸ್‌: ಹಾಕಿಯಲ್ಲಿ ಭಾರತ ಕ್ವಾರ್ಟರ್ ಫೈನಲ್‌ಗೆ

Update: 2016-08-12 23:04 IST

  ರಿಯೋ ಡಿ ಜನೈರೊ, ಆ.12: ಇಲ್ಲಿ ನಡೆದ ಒಲಿಂಪಿಕ್ಸ್‌ನ ಪುರುಷರ ಹಾಕಿಯ ‘ಬಿ’ ಗುಂಪಿನ ಭಾರತ ಮತ್ತು ಕೆನಡಾ ತಂಡಗಳ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದ್ದು, ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಇಂದು ಅವಕಾಶ ದೃಢಪಡಿಸಿದೆ.

 ಇದರೊಂದಿಗೆ ಭಾರತ 36 ವರ್ಷಗಳ ಬಳಿಕ ಪುರುಷರ ಹಾಕಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿದೆ. ಭಾರತ ‘ಬಿ’ ಗುಂಪಿನಲ್ಲಿ 5 ಪಂದ್ಯಗಳಲ್ಲಿ 7 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೂರನೆ ಸ್ಥಾನ ಗಿಟ್ಟಿಸಿಕೊಂಡಿದೆ
ಹಾಲೆಂಡ್, ಜರ್ಮನಿ ಮತ್ತು ಅರ್ಜೆಂಟೀನಾ ತಂಡ ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿದೆ.
1980ರಲ್ಲಿ ಮಾಸ್ಕೊ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾರತ ಕ್ವಾರ್ಟರ್ ಫೈನಲ್ ತಲುಪಿತ್ತು. ಆ ಬಳಿಕ ಇದೇ ಮೊದಲ ಬಾರಿ ನಾಕೌಟ್ ಹಂತ ತಲುಪಿದೆ.
 ಭಾರತದ ಪರ ಆಕಾಶ್‌ದೀಪ್ ಸಿಂಗ್ (33ನೆ ನಿಮಿಷ) ಮತ್ತು ರಮಣದೀಪ್ ಸಿಂಗ್(41ನೆ ನಿಮಿಷ), ಕೆನಡಾ ತಂಡದ ಸ್ಕಾಟ್ ಟಪ್ಟರ್(33ನೆ ನಿ., 52ನೆ ನಿಮಿಷ) ಗೋಲು ದಾಖಲಿಸಿದರು.
ಭಾರತ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಕೆನಡಾದ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿತ್ತು. ಎರಡು ಗೋಲು ದಾಖಲಿಸಿದ್ದ ಭಾರತಕ್ಕೆ ಕೆನಡಾದ ಸ್ಕಾಟ್ ಟಪ್ಪರ್ ಗೆಲುವು ನಿರಾಕರಿಸಿದರು. ಅವರು ಎರಡು ಗೋಲು ಬಾರಿಸಿ ಕೆನಡಾ ತಂಡಕ್ಕೆ ಡ್ರಾ ಸಾಧಿಸಲು ನೆರವಾದರು.

  ಕೆನಡಾ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಡ್ರಾಗೊಳಿಸುವಲ್ಲಿ ಯಶಸ್ವಿಯಾದರೂ, ಅದು ಕೊನೆಯ ಸ್ಥಾನದಿಂದ ಮೇಲೆರಲಿಲ್ಲ. ಒಲಿಂಪಿಕ್ಸ್‌ನಲ್ಲಿ 6ನೆ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. ಇಂದಿನ ಪಂದ್ಯದಲ್ಲಿ ಭಾರತ ಮತ್ತು ಕೆನಡಾ ತಂಡಕ್ಕೆ ಆಟದ 30 ನಿಮಿಷಗಳ ಅವಧಿಯಲ್ಲಿ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. 33ನೆ ನಿಮಿಷದಲ್ಲಿ ಭಾರತದ ಆಕಾಶ್ ದೀಪ್ ಸಿಂಗ್ ಗೋಲು ದಾಖಲಿಸುವ ಮೂಲಕ ತಂಡದ ಖಾತೆ ತೆರೆದಿದ್ದರು. ಆದರೆ ಭಾರತದಿಂದ ಗೋಲು ದಾಖಲಾದ ಬೆನ್ನಲ್ಲೆ ಕೆನಡಾದ ಸ್ಕಾಟ್ ಟಪ್ಟರ್ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು.
 41ನೆ ನಿಮಿಷದಲ್ಲಿ ಭಾರತದ ರಮಣದೀಪ್ ಸಿಂಗ್ ಗೋಲು ಜಮೆ ಮಾಡಿ ತಂಡಕ್ಕೆ 2-1 ಮುನ್ನಡೆ ಸಾಧಿಸಲು ಸಹಾಯ ಮಾಡಿದರು. 52ನೆ ನಿಮಿಷದಲ್ಲಿ ಎರಡನೆ ಗೋಲು ದಾಖಲಿಸಿದ ಸ್ಕಾಟ್ ಕೆನಡಾಕ್ಕೆ 2-2 ಸಮಬಲ ಸಾಧಿಸಲು ನೆರವಾದರು. ಬಳಿಕ ಉಭಯ ತಂಡಗಳಿಂದಲೂ ಗೋಲು ಬರಲಿಲ್ಲ. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News