ಫೆಲ್ಪ್ಸ್‌ಗೆ ಆಘಾತ ನೀಡಿದ ಸಿಂಗಾಪುರದ ಜೋಸೆಫ್‌ಗೆ ಚಿನ್ನ
ರಿಯೋ ಡಿ ಜನೈರೋ, ಆ.13: ಅಮೆರಿಕದ ಚಿನ್ನದ ಮೀನು ಖ್ಯಾತಿಯ ಈಜುಪಟು ಮೈಕಲ್ ಫೆಲ್ಪ್ಸ್‌ಗೆ ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಆಘಾತ ನೀಡಿರುವ ಸಿಂಗಾಪುರದ ಜೋಸೆಫ್ ಸ್ಕೂಲಿಂಗ್ ಚಿನ್ನ ಬಾಚಿಕೊಂಡಿದ್ದಾರೆ.
ಪುರುಷರ 100 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಫೆಲ್ಪ್ಸ್ ಚಿನ್ನ ಜಯಿಸಿ ಕೂಟದಲ್ಲಿ ಐದನೆ ಹಾಗೂ ತನ್ನ ಒಲಿಂಪಿಕ್ಸ್‌ನ ಚಿನ್ನದ ಖಾತೆಗೆ 23ನೆ ಚಿನ್ನ ಜಮೆ ಮಾಡುವ ಯೋಜನೆಯಲ್ಲಿದ್ದರು. ಆದರೆ ಜೋಸೆಫ್ ಅವರಿಗೆ ಆಘಾತ ನೀಡಿ ಸಿಂಗಾಪುರಕ್ಕೆ ಮೊದಲ ಚಿನ್ನ ತಂದು ಕೊಟ್ಟರು.
21ರ ಹರೆಯದ ಜೋಸೆಫ್ 50.39 ಸೆಕೆಂಡ್‌ಗಳಲ್ಲಿ ದಡ ಸೇರಿ ಚಿನ್ನಕ್ಕೆ ಕೊರಳೊಡ್ಡಿದರು. ಆದರೆ 51.14 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಫೆಲ್ಪ್ಸ್ ಮತ್ತು ದಕ್ಷಿಣ ಆಫ್ರಿಕದ ಕ್ಲೇಡ್ ಲಿ ಕ್ಲೋಸ್ ರಜತ ಪದಕ ಹಂಚಿಕೊಂಡರು.
ಫೆಲ್ಪ್ಸ್ ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಪದಕಗಳ ಸಂಖ್ಯೆಯನ್ನು 27ಕ್ಕೆ ಏರಿಸಿದ್ದಾರೆ. ಅವರು ಪಡೆದಿರುವ ಒಲಿಂಪಿಕ್ಸ್ ಪದಕಗಳು 22 ಚಿನ್ನ, 3 ಬೆಳ್ಳಿ ಹಾಗೂ 2 ಕಂಚು.ಮೈಕೆಲ್ ಗೆ ತಮ್ಮ ವೃತ್ತಿ ಬದುಕಿನಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಇನ್ನೊಂದು ಚಿನ್ನದ ಪದಕ ಪಡೆಯುವ ಅವಕಾಶವಿದೆ. 400 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆ .ಶನಿವಾರ ರಾತ್ರಿ ನಡೆಯಲಿದೆ.