ಒಲಿಂಪಿಕ್ ಗೇಮ್ಸ್ ಟೆನಿಸ್ ಡಬಲ್ಸ್: ರಫೆಲ್ ನಡಾಲ್‌ಗೆ ಬಂಗಾರ
ರಿಯೊ ಡಿ ಜನೈರೊ, ಆ.13: ಸ್ಪೇನ್‌ನ ರಫೆಲ್ ನಡಾಲ್ ಒಲಿಂಪಿಕ್ ಗೇಮ್ಸ್‌ನಲ್ಲಿ ಎರಡನೆ ಬಾರಿ ಚಿನ್ನದ ಪದಕ ಜಯಿಸಿದರು. ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ತಲುಪಿರುವ ನಡಾಲ್ ಮೂರನೆ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಶುಕ್ರವಾರ ನಡೆದ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ನಡಾಲ್ ಹಾಗೂ ಮಾರ್ಕ್ ಲೆಪೆಝ್ ಜೋಡಿ ರೊಮಾನಿಯದ ಫ್ಲಾರಿನ್ ಮೆರ್ಗಿಯ ಹಾಗೂ ಹೊರಿಯಾ ಟೆಕಾವು ವಿರುದ್ಧ 6-2, 3-6, 4-6 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನಡಾಲ್ ಅಮೆರಿಕದ ಸೆರೆನಾ ಹಾಗೂ ವೀನಸ್ ವಿಲಿಯಮ್ಸ್, ಚಿಲಿಯ ನಿಕೊಲಸ್ ಮಸ್ಸು ಬಳಿಕ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ನಾಲ್ಕನೆ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.
30ರ ಹರೆಯದ ನಡಾಲ್ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಬ್ರೆಝಿಲ್‌ನ ಥಾಮಸ್ ಬೆಲ್ಲುಸಿ ಅವರನ್ನು 2-6, 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಫೈನಲ್‌ನಲ್ಲಿ ಸ್ಥಾನ ಪಡೆಯಲು ಶನಿವಾರ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ.