ಬರದ ನಾಡಲ್ಲಿ ಬಡತನದ ನಡುವೆಯೂ ಅಪೂರ್ವ ಸಾಧನೆ ಮೆರೆದ ಲಲಿತಾ..!
ರಿಯೋ ಡಿ ಜನೈರೊ,ಆ.15: ಲಲಿತಾ ಶಿವಾಜಿ ಬಾಬರ್ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಮೂರನೆ ಅಥ್ಲಿಟ್ ಲಲಿತಾ ಅವರು ಸೋಮವಾರ ರಾತ್ರಿ ನಡೆದ ವನಿತೆಯರ 3,000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ 10ನೆ ಸ್ಥಾನದೊಂದಿಗೆ ಗೌರವಯುತವಾಗಿ ಒಲಿಂಪಿಕ್ಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು.
ಒಟ್ಟು 18ಮಂದಿ ಫೈನಲ್‌ನಲ್ಲಿ ಪದಕದ ಬೇಟೆ ನಡೆಸಿದ್ದರು. ಆದರೆ ಲಲಿತಾ ಕಠಿಣ ಹೋರಾಟ ನಡೆಸಿದ್ದರೂ, ಅವರಿಗೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಅದೃಷ್ಟ ಕೈಗೊಟ್ಟಿತು. ಕೆಲವೇ ಸೆಕೆಂಡ್‌ಗಳ ಅಂತರದಿಂದ ಪದಕ ತಪ್ಪಿತು.
ಕಂಚು ಜಯಿಸಿದ ಅಮೆರಿಕದ ಎಮಾ ಕೊಬಮ್ 9 ನಿಮಿಷ ಮತ್ತು 07.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೆ ಸ್ಥಾನದೊಂದಿಗೆ ಕಂಚು ಪಡೆದಿದ್ದರು. ಲಲಿತಾ 9 ನಿಮಿಷ ಮತ್ತು 22.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 10ನೆ ಸ್ಥಾನಕ್ಕೆ ತೃಪ್ತಿಪಟ್ಟರು.
ಬರಪೀಡಿತ ಮಹಾರಾಷ್ಟ್ರದ ಸತಾರ ಜಿಲ್ಲೆಯ 27ರ ಹರೆಯದ ಲಲಿತಾ ಅವರು ರೈತನ ಮಗಳು. ಕುಟಂಬವನ್ನು ಬಡತನದ ಬೇಗೆಯಿಂದ ಪಾರು ಮಾಡಲು ಓಟವನ್ನೇ ನಂಬಿಕೊಂಡು ಯಶಸ್ಸು ಗಳಿಸಿದವರು.
ಲಲಿತಾರಿಗೆ ಚಿಕ್ಕಂದಿನಲ್ಲಿ ನಡೆದು ಅಭ್ಯಾಸ ಕಡಿಮೆ. ಮನೆಯಿಂದ ಶಾಲೆಗೆ 4 ಕಿ.ಮೀ ದೂರವನ್ನು ಓಡಿಕೊಂಡೇ ಮುಟ್ಟುತ್ತಿದ್ದರು. ಶಾಲೆ ಬಿಟ್ಟೊಡನೆ ಮನೆಗೆ ಓಡಿಕೊಂಡೇ ವಾಪಸಾಗುತ್ತಿದ್ದರು. ಮನೆಯಲ್ಲಿ ಹೆತ್ತವರಿಗೆ ಸಹಾಯ ಮಾಡುತ್ತಿದ್ದರು. ಅವರ ಮನೆಯಲ್ಲಿ ಒಟ್ಟು 17 ಮಂದಿ ಸದಸ್ಯರಿದ್ದರು. ಮನೆ ಮಂದಿಗೆ ಅಗತ್ಯದ ನೀರನ್ನು ಓಡಿಕೊಂಡೇ ಹೋಗಿ ತರುತ್ತಿದ್ದರು. ಎಲ್ಲ ರಸ್ತೆಗಳಲ್ಲೂ ಬರಿಗಾಲಲ್ಲೆ ಓಡಿ ಅಭ್ಯಾಸ ಮಾಡಿಕೊಂಡಿದ್ದ ಲಲಿತಾ ಬಾಬರ್ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ಉತ್ತಮ ಮಾಡಿದ್ದಾರೆ.
ಲಲಿತ 2004ರಲ್ಲಿ 10 ಕಿ.ಮೀ ರಸ್ತೆ ಓಟದಲ್ಲಿ ಸ್ಪ್ಫರ್ಧಿಸಿದಾಗ ಆಕೆಗೆ ಆಗ 15ರ ಹರೆಯ.ಮೊದಲ ಸ್ಥಾನದೊಂದಿಗೆ 10 ಸಾವಿರ ರೂ. ಮೊತ್ತದ ಬಹುಮಾನದ ಚೆಕ್ ಆಕೆಗೆ ಕೈಗೆ ಸಿಕ್ಕಿತು. ಬಳಿಕ ಮ್ಯಾರಥಾನ್, ಹಾಫ್ ಮ್ಯಾರಥಾನ್ ಕಡೆಗೆ ಗಮನ ಹರಿಸಿದ ಲಲಿತಾ ಮುಂಬೈ ಮ್ಯಾರಥಾನ್‌ನಲ್ಲಿ ಹ್ಯಾಟ್ರಿಕ್ ಚಾಂಪಿಯನ್.
ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಲಲಿತಾ 2014ರಲ್ಲಿ ಇಂಚೋನ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಸ್ಪರ್ಧಿಸಿ 9:35.37 ಸಾಧನೆಯೊಂದಿಗೆ ಬೆಳ್ಳಿ ಪಡೆದಿದ್ದರು.2015ರಲ್ಲಿ ಚೀನಾದ ವೂಹಾನ್‌ನಲ್ಲಿ ನಡೆದ 3000 ಮೀ .ಚೇಸ್‌ನಲ್ಲಿ 9 ನಿಮಿಷ 34.13 ಸೆಕೆಂಡ್‌ಗಳಳ್ಲಿ ಗುರಿ ತಲುಪಿ ಚಿನ್ನ ಪಡೆದಿದ್ದರು. ಬಳಿಕ ಬೀಜಿಂಗ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್(9:29.64) ನಲ್ಲಿ 8ನೆ ಸ್ಥಾನ ಗಿಟ್ಟಿಸಿಕೊಂಡಿದ್ದರು.
2016 ಎಪ್ರಿಲ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಫೆಡರೇಶನ್ ಕಪ್‌ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್(9:27.09) ಉತ್ತಮ ದಾಖಲೆಯೊಂದಿಗೆ ರಿಯೋ ಒಲಿಂಪಿಕ್ಸ್‌ಗೆ ತೇರ್ಗಡೆಯಾಗಿದ್ದರು.
ರಿಯೋ ಒಲಿಂಪಿಕ್ಸ್‌ನ 3000 ಮೀ. ಸ್ಟೀಪಲ್ ಚೇಸ್‌ನ ಹೀಟ್‌ನಲ್ಲಿ 9:19.76 ಸಾಧನೆಯೊಂದಿಗೆ ಫೈನಲ್ ತಲುಪಿದ್ದ ಅವರು 32 ವರ್ಷಗಳ ಬಳಿಕ ಟ್ರಾಕ್ ಇವೆಂಟ್‌ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಅಥ್ಲೀಟ್ ಎಂಬ ದಾಖಲೆ ನಿರ್ಮಿಸಿದ್ದರು.
3,000 ಮೀ ಸ್ಟೀಪಲ್ ಚೇಸ್‌ನಲ್ಲಿ ಭಾರತದ ಪರ ಲಲಿತಾ ಬಾಬರ್ ಸಾಧನೆ
ವರ್ಷ ಸ್ಪರ್ಧೆ ಸ್ಥಳ ಸ್ಥಾನ ಸಾಧನೆ
2014 ಏಷ್ಯನ್ ಗೇಮ್ಸ್ ಇಂಚೋನ್ ಬೆಳ್ಳಿ 9:35:37
2015 ಏಷ್ಯನ್ ಚಾಂಪಿಯನ್‌ಶಿಪ್ ವೂಹಾನ್ ಚಿನ್ನ 9:34.13
2015 ವರ್ಲ್ಡ್ ಚಾಂಪಿಯನ್‌ಶಿಪ್ ಬೀಜಿಂಗ್ 8ನೆ 9:29.64
2016 ಒಲಿಂಪಿಕ್ಸ್ ಗೇಮ್ಸ್ ರಿಯೋ 10ನೆ 9:22.74