ಪದಕ ವಂಚಿತರಾದರೂ, ಮಿಲಿಯನ್ ಜನರ ಹೃದಯ ಗೆದ್ದ ದೀಪಾ

Update: 2016-08-15 17:33 GMT

ಅಗರ್ತಲ, ಆ.15: ಭಾರತದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ರವಿವಾರ ರಾತ್ರಿ ರಿಯೋ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ ಕಂಚಿನ ಪದಕ ವಂಚಿತರಾದರೂ ತ್ರಿಪುರಾ ಸಹಿತ ದೇಶದ ಜನರ ಹೃದಯ ಗೆಲ್ಲಲು ಯಶಸ್ವಿಯಾಗಿದ್ದಾರೆ.

ಜಿಮ್ನಾಸ್ಟಿಕ್ ಫೈನಲ್‌ನಲ್ಲಿ ಅಪಾಯಕಾರಿ ‘ಪ್ರೊಡೊನೊವಾ’ ವಿಭಾಗದಲ್ಲಿ ಸ್ಪರ್ಧಿಸಿದ್ದ ದೀಪಾ ಲ್ಯಾಂಡಿಂಗ್‌ನ ಮೇಲೆ ಮೈದಾನವನ್ನು ಸ್ವಲ್ಪವೇ ಸ್ಪರ್ಶಿಸಿದ ಕಾರಣ ಅಂಕವನ್ನು ಕಳೆದುಕೊಂಡರು. ಒಟ್ಟು 15,066 ಅಂಕ ಗಳಿಸಿದ್ದ ದೀಪಾ ನಾಲ್ಕನೆ ಸ್ಥಾನ ಪಡೆದಿದ್ದರು.

ದೀಪಾ ಪದಕ ಜಯಿಸುವುದರಿಂದ ವಂಚಿತರಾದರೂ ಈ ಹಿಂದಿಗಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ದೀಪಾರ ಹೆತ್ತವರು, ಸಂಬಂಧಿಕರು ಹಾಗೂ ಹಿತೈಷಿಗಳು ಅಭಿಪ್ರಾಯಪಟ್ಟಿದ್ದಾರೆ.

 ‘‘ಫೈನಲ್‌ನಲ್ಲಿ ನನ್ನ ಮಗಳ ಪ್ರದರ್ಶನ ಉತ್ತಮವಾಗಿತ್ತು. ಆಕೆಯ ಪ್ರದರ್ಶನದಿಂದ ನಮಗೆ ಅತೀವ ಸಂತಸವಾಗಿದೆ. ಆಕೆ ನನ್ನ ಮಗಳು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತಿದೆ. ಭಾರತದ ಪುಟ್ಟ ರಾಜ್ಯ ತ್ರಿಪುರಾದಿಂದ ವಿಶ್ವದ ಅಗ್ರ ಜಿಮ್ನಾಸ್ಟಿಕ್ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ತೆರಳಿದ್ದು ಹೆಮ್ಮೆಯ ವಿಷಯ’’ ಎಂದು ದೀಪಾರ ತಂದೆ ದುಲಾಲ್ ಕರ್ಮಾಕರ್ ಹೇಳಿದ್ದಾರೆ.

‘‘ನನ್ನ ಮಗಳು 2018ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದೇ ಗೆಲ್ಲುತ್ತಾಳೆ’’ ಎಂದು ದೀಪಾರ ತಾಯಿ ಗೌರಿ ದೇವಿ ಹೇಳಿದ್ದಾರೆ.

2018ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತದೆ. ರವಿವಾರದ ಸಂಜೆಯಿಂದಲೇ ತ್ರಿಪುರಾದ ರಾಜಧಾನಿ ಅಗರ್ತಲದ ಹೊರಭಾಗ ಅಭಯ್‌ನಗರದಲ್ಲಿರುವ ದೀಪಾರ ಮನೆಯ ಹೊರಗೆ ಸಾವಿರಾರು ಜನರು ಹಾಗೂ ಪತ್ರಕರ್ತರು ಜಮಾಯಿಸಿದ್ದರು.

‘‘ಅರ್ಹತಾ ಸುತ್ತಿನಲ್ಲಿ 8ನೆ ಸ್ಥಾನ ಪಡೆದಿದ್ದ ದೀಪಾ ಫೈನಲ್‌ನಲ್ಲಿ ನಾಲ್ಕನೆ ಸ್ಥಾನಕ್ಕೆ ತಲುಪಿರುವುದಕ್ಕೆ ನಮಗೆಲ್ಲರಿಗೂ ತುಂಬಾ ಸಂತೋಷವಾಗುತ್ತಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ದೀಪಾ ಪದಕ ಗೆಲ್ಲುತ್ತಾರೆಂಬ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವಿದೆ. ತ್ರಿಪುರಾದ ಹೆಸರನ್ನು ವಿಶ್ವದ ಅಗ್ರಮಾನ್ಯ ಕ್ರೀಡೆಯಲ್ಲಿ ಬೆಳಗಿಸಿರುವ ದೀಪಾರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಾಗುತ್ತಿದೆ’’ ಎಂದು ದೀಪಾರ ನೆರೆಮನೆಯವರಾದ ಸಿಪಿಐ-ಎಂ ಪಕ್ಷದ ಮುಖಂಡ ಶಂಕರ್ ಪ್ರಸಾದ್ ದತ್ತ್ ಹೇಳಿದ್ದಾರೆ.

 ರವಿವಾರ ಸಂಜೆಯಿಂದಲೇ ತ್ರಿಪುರಾದ ಜನತೆ ಟಿವಿ ಸೆಟ್ ಮುಂದೆ ಕುಳಿತುಕೊಂಡಿದ್ದರು. ದೀಪಾ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬರ ನೀಗಿಸುತ್ತಾರೆಂಬ ವಿಶ್ವಾಸದಲ್ಲಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.

‘‘ದೀಪಾ ಪದಕವನ್ನು ಗೆಲ್ಲದೆ ಇದ್ದರೂ ಫೈನಲ್‌ನಲ್ಲಿ ಆಕೆಯ ಪ್ರದರ್ಶನ ಅದ್ಭುತವಾಗಿತ್ತು. ದೀಪಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಫೈನಲ್ ಸುತ್ತಿಗೆ ತಲುಪಿ ಹೊಸ ಇತಿಹಾಸ ನಿರ್ಮಿಸಿದ್ದಾರೆ’’ ಎಂದು ತ್ರಿಪುರಾದ ಕ್ರೀಡಾಮಂತ್ರಿ ಸಾಹಿದ್ ಚೌಧರಿ ಹೇಳಿದ್ದಾರೆ.

ದೀಪಾ 52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಪಟು ಎನಿಸಿಕೊಂಡಿದ್ದರು. 1964ರಲ್ಲಿ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಭಾರತ ಭಾಗವಹಿಸಿತ್ತು. ಈ ವರೆಗೆ ಭಾರತದ 11 ಪುರುಷ ಜಿಮ್ನಾಸ್ಟಿಕ್ ತಾರೆಯರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News