ಮಹಿಳೆಯರ ಕುಸ್ತಿ: ಸಾಕ್ಷಿ ಸೋತರೂ ಕಮರದ ಕಂಚಿನ ಕನಸು
ರಿಯೋ ಡಿ ಜನೈರೊ, ಆ.17: ರಿಯೋ ಒಲಿಂಪಿಕ್ಸ್‌ನಲ್ಲಿ ವನಿತೆಯರ 58 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್ ಸೋಲುಂಡಿದ್ದರೂ ಕಂಚಿನ ಪದಕ ಗೆಲ್ಲುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಬುಧವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಸಾಕ್ಷಿ ರಶ್ಯದ ವಾಲೆರಿಯಾ ಕೊಬ್ಲೊವಾ ವಿರುದ್ಧ 2-9 ಅಂಕಗಳ ಅಂತರದಿಂದ ಶರಣಾದರು. ವಾಲೆರಿಯಾ ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಸಾಕ್ಷಿ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಈ ಸುತ್ತಿನಲ್ಲಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಕಂಚಿನ ಪದಕ ಸಿಗಲಿದೆ. ಈ ಮೂಲಕ ಭಾರತ ಪದಕದ ಖಾತೆ ತೆರೆಯಲಿದೆ.
ಇದಕ್ಕೆ ಮೊದಲು ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊಡೊವಾದ ಮರಿಯಾನಾ ಚೆರ್ಡಿವರಾರನ್ನು ಮಣಿಸಿದ ಸಾಕ್ಷಿ ಅಂತಿಮ-8ರ ಹಂತ ತಲುಪಿದರು. ಅಂತಿಮ-32ರ ಪಂದ್ಯದಲ್ಲಿ ಮಲಿನ್ ಜೊಹಾನ್ನಾ ಮಾಟ್‌ಸನ್ ವಿರುದ್ಧ ಒಂದು ಹಂತದಲ್ಲಿ 0-4 ರಿಂದ ಹಿನ್ನಡೆಯಲ್ಲಿದ್ದ ಸಾಕ್ಷಿ ಮರು ಹೋರಾಟವನ್ನು ನೀಡಲು ಯಶಸ್ವಿಯಾಗಿದ್ದು, ಅಂತಿಮವಾಗಿ 5-4 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಕ್ವಾರ್ಟರ್‌ಫೈನಲ್‌ನಲ್ಲಿ ವಿನೇಶ್‌ಗೆ ‘ಆಘಾತಕಾರಿ’ ಸೋಲು: ಭಾರತದ ಕುಸ್ತಿ ತಾರೆ ವಿನೇಶ್ ಫೋಗತ್ ಮಹಿಳೆಯರ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಸನ್ ಯನನ್ ವಿರುದ್ಧ ಪಂದ್ಯದ ವೇಳೆ ಗಾಯಗೊಂಡ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ವಿನೇಶ್ ಒಂದು ಅಂಕ ಮುನ್ನಡೆಯಲ್ಲಿದ್ದಾಗ ಮಂಡಿನೋವು ಕಾಣಿಸಿಕೊಂಡ ಕಾರಣ ಭಾರೀ ಹಿನ್ನಡೆ ಅನುಭವಿಸಿದರು. ಅಂತಿಮವಾಗಿ 2-1 ಅಂತರದಿಂದ ಜಯ ಸಾಧಿಸಿದ ಚೀನಾದ ಆಟಗಾರ್ತಿ ಸೆಮಿಫೈನಲ್‌ಗೆ ತಲುಪಿದ್ದಾರೆ. ವಿನೇಶ್‌ಗೆ ಕಾಣಿಸಿಕೊಂಡ ಗಾಯ ಗಂಭೀರವಾಗಿದ್ದು, ಒಂದು ವೇಳೆ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿದರೆ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಇದಕ್ಕೆ ಮೊದಲು ನಡೆದ ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ವಿನೇಶ್ ರೊಮಾನಿಯದ ಎದುರಾಳಿ ಎಮಿಲಿಯಾ ಅಲಿನಾ ವಿರುದ್ಧ 11-0 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು.