×
Ad

ಅಮೆರಿಕದ ಜಿಮ್ನಾಸ್ಟ್ ತಾರೆ ಸಿಮೊನ್‌ಗೆ ನಾಲ್ಕನೆ ಸ್ವರ್ಣ

Update: 2016-08-17 23:52 IST

ರಿಯೋ ಡಿಜನೈರೊ, ಆ.17: ಅಮೆರಿಕದ ಯುವ ಜಿಮ್ನಾಸ್ಟ್ ತಾರೆ ಸಿಮೊನ್ ಬೇಲ್ಸ್ ನಾಲ್ಕನೆ ಚಿನ್ನದ ಪದಕವನ್ನು ಜಯಿಸುವುದರೊಂದಿಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಮಂಗಳವಾರ ನಡೆದ ಜಿಮ್ನಾಸ್ಟಿಕ್ ಸ್ಪರ್ಧೆಯ ಫೈನಲ್‌ನಲ್ಲಿ 15,966 ಅಂಕ ಗಳಿಸಿದ 19ರ ಹರೆಯದ ಸಿಮೊನ್ ಸಹ ಆಟಗಾರ್ತಿ, ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅಲಿ ರೈಸ್ಮನ್‌ರನ್ನು ಹಿಂದಕ್ಕೆ ತಳ್ಳಿ ಚಿನ್ನದ ಪದಕ ಜಯಿಸಿದರು. ಅಲಿ 15.500 ಅಂಕ ಗಳಿಸಿ ಎರಡನೆ ಸ್ಥಾನ ಪಡೆದರು.

ಸಿಮೊನ್ 1984ರ ಬಳಿಕ ಒಂದೇ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಜಯಿಸಿದ ಮೊದಲ ಮಹಿಳಾ ಅಥ್ಲೀಟ್ ಎಂಬ ಐತಿಹಾಸಿಕ ಸಾಧನೆ ಮಾಡಿದರು. 1984ರಲ್ಲಿ ರೊಮಾನಿಯದ ಎಕ್ಟೆರಿನಾ ಝಾಬೊ ಈ ಸಾಧನೆ ಮಾಡಿದ್ದರು.

ಸಿಮೊನ್ ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಒಟ್ಟು 5 ಪದಕಗಳನ್ನು ಜಯಿಸಿದ್ದು, ಇದರಲ್ಲಿ ನಾಲ್ಕು ಚಿನ್ನ ಹಾಗೂ ಒಂದು ಕಂಚಿನ ಪದಕವಿದೆ.

2008ರಲ್ಲಿ ನಾಸ್ಟಿಯಾ ಲುಕಿನ್ ಒಲಿಂಪಿಕ್ಸ್‌ನಲ್ಲಿ ಐದು ಚಿನ್ನದ ಪದಕವನ್ನು ಜಯಿಸಿದ್ದರು. ಸಿಮೊನ್‌ಗೆ ಐದು ಚಿನ್ನದ ಪದಕ ಗೆಲ್ಲುವ ಅವಕಾಶವಿತ್ತು. ಆದರೆ, ಅವರು ಸೋಮವಾರ ನಡೆದ ಜಿಮ್ನಾಸ್ಟಿಕ್‌ನಲ್ಲಿ ಬ್ಯಾಲನ್ಸ್ ಬೀಮ್‌ನಲ್ಲಿ ತಪ್ಪು ಹೆಜ್ಜೆ ಇಟ್ಟ ಕಾರಣ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News