ರಿಯೋ 200 ಮೀ. ಓಟ: ಉಸೇನ್ ಬೋಲ್ಟ್ ಫೈನಲ್‌ಗೆ

Update: 2016-08-18 18:38 GMT

ರಿಯೋ ಡಿಜನೈರೊ, ಆ.18: ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್‌ನ 200 ಮೀ. ಓಟದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಆದರೆ, ಅಮೆರಿಕದ ಓಟಗಾರ, ಬೋಲ್ಟ್ ಪ್ರತಿಸ್ಪರ್ಧಿ ಜಸ್ಟಿನ್ ಗ್ಯಾಟ್ಲಿನ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಎರಡು ವರ್ಷ ನಿಷೇಧದ ಶಿಕ್ಷೆ ಎದುರಿಸಿದ್ದ ಗ್ಯಾಟ್ಲಿನ್ ಸೆಮಿಫೈನಲ್‌ನಲ್ಲಿ ಮಂಡಿನೋವು ಕಾಣಿಸಿಕೊಂಡಿದ್ದು, 20.37 ಸೆಕೆಂಡ್‌ನಲ್ಲಿ ಗುರಿ ತಲುಪಿ 6ನೆ ಸ್ಥಾನ ಪಡೆದಿದ್ದು, ಫೈನಲ್‌ಗೆ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲರಾದರು.

ಬ್ರಿಟನ್‌ನ 22ರ ಪ್ರಾಯದ ಆಡಮ್ ಗೆಮಿಲ್ ಅಮೆರಿಕದ ಲಾಶನ್ ಮೆರಿಟ್ ಫೈನಲ್‌ಗೆ ತಲುಪಿದ್ದಾರೆ. ಮೆರಿಟ್ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಬೋಲ್ಟ್‌ಗೆ ಕಠಿಣ ಸ್ಪರ್ಧೆ ನೀಡುವ ಸಾಧ್ಯತೆಯಿದೆ.

ಓಟದಲ್ಲಿ ‘ಟ್ರಿಪಲ್ ಟ್ರಿಪಲ್’ ಮೇಲೆ ಕಣ್ಣಿಟ್ಟಿರುವ ಬೋಲ್ಟ್ 19.78 ಸೆಕೆಂಡ್‌ನಲ್ಲಿ ಗುರಿ ತಲುಪಿ ಫೈನಲ್‌ನಲ್ಲಿ ಸ್ಥಾನ ದೃಢಪಡಿಸಿದರು. ಬೋಲ್ಟ್ ಈಗಾಗಲೇ 100 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದು, 200 ಮೀ. ಓಟದ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದಾರೆ.

ಗ್ಯಾಟ್ಲಿನ್ ರಿಯೋ ಗೇಮ್ಸ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆದರೆ, ಅವರು ನವೆಂಬರ್‌ನಲ್ಲಿ ಕಾಣಿಸಿಕೊಂಡಿದ್ದ ಬಲ ಮಂಡಿನೋವಿನಿಂದ ಇನ್ನೂ ಸರಿಯಾಗಿ ಚೇತರಿಸಿಕೊಂಡಿರಲಿಲ್ಲ. ಬರ್ಲಿನ್‌ನಲ್ಲಿ 2009ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 19.19 ಸೆಕೆಂಡ್‌ನಲ್ಲಿ ಗುರಿ ತಲುಪಿ ತಾನು ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿಯುವುದಾಗಿ ಬೋಲ್ಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಖಂಡಿತವಾಗಿಯೂ ವಿಶ್ವ ದಾಖಲೆಗಾಗಿ ಪ್ರಯತ್ನಿಸುವೆ ಎಂದು ಬೋಲ್ಟ್ ತಿಳಿಸಿದರು.

ರವಿವಾರ 100 ಮೀ. ಓಟದಲ್ಲಿ ಸತತ ಮೂರನೆ ಬಾರಿ ಚಿನ್ನದ ಪದಕವನ್ನು ಜಯಿಸಿರುವ ಬೋಲ್ಟ್ 2008 ಹಾಗೂ 2012ರ ಒಲಿಂಪಿಕ್ಸ್‌ನಂತೆಯೇ ಈ ಬಾರಿಯ ಒಲಿಂಪಿಕ್ಸ್‌ನಲ್ಲೂ 100, 200 ಹಾಗೂ 4-100 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸುವತ್ತ ಗುರಿ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News