ರೋಹ್ಟಟ್‌ನಿಂದ ರಿಯೋ ತನಕ: ಸಾಕ್ಷಿಯ ಐತಿಹಾಸಿಕ ಸಾಧನೆಯ ಹಾದಿ
ರಿಯೋ ಡಿಜನೈರೊ, ಆ.18: ಕ್ರೀಡೆಯ ಅತ್ಯಂತ ದೊಡ್ಡ ವೇದಿಕೆ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿ ರಾತ್ರೋರಾತ್ರಿ ಮನೆ ಮಾತಾಗಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಹರ್ಯಾಣದ ಸಣ್ಣ ಹಳ್ಳಿಯಿಂದ ರಿಯೋ ತನಕ ನಡೆಸಿದ ಪಯಣ ಭಾರತದ ಕ್ರೀಡಾಳುಗಳಿಗೆ ಸ್ಫೂರ್ತಿಯಾಗಿದೆ. ಸಾಕ್ಷಿಯ ಈ ಸಾಧನೆಯ ಹಿಂದೆ 12 ವರ್ಷಗಳ ಪರಿಶ್ರಮ ಅಡಗಿದೆ.
ಹರ್ಯಾಣದ ರೋಹ್ಟಕ್ ಜಿಲ್ಲೆಯ ಮೊಖ್ರಾ ಹಳ್ಳಿಯೊಂದರ ಬಡ ಕುಟುಂಬದಲ್ಲಿ 1992ರಲ್ಲಿ ಜನಿಸಿದ್ದ ಸಾಕ್ಷಿ ಬಾಲ್ಯದಲ್ಲಿ ಕಬಡ್ಡಿ ಹಾಗೂ ಕ್ರಿಕೆಟ್‌ನತ್ತ ಆಸಕ್ತಿ ಹೊಂದಿದ್ದರು. ಆದರೆ, ಕುಸ್ತಿ ಅವರ ಫೇವರಿಟ್ ಕ್ರೀಡೆಯಾಗಿತ್ತು. ಸಾಕ್ಷಿ 12 ರ ಹರೆಯದಲ್ಲಿ ಚೋಟು ರಾಮ್ ಕ್ರೀಡಾಂಗಣದಲ್ಲಿ ಕುಸ್ತಿ ಅಖಾಡದಲ್ಲಿ ಈಶ್ವರ್ ದಾಹಿಯಾ ಮಾರ್ಗದರ್ಶನದಲ್ಲಿ ಕುಸ್ತಿ ತರಬೇತಿ ಪಡೆಯಲಾರಂಭಿಸಿದ್ದರು.
ಸಾಕ್ಷಿಗೆ ಆರಂಭದಲ್ಲಿ ಕುಸ್ತಿ ಪಾಠ ಕಲಿಯಲು ವಿರೋಧ ಇತ್ತು. ಕುಸ್ತಿ ಹುಡುಗರ ಕ್ರೀಡೆ ಎಂಬ ಭಾವನೆ ಸ್ಥಳೀಯರಲ್ಲಿತ್ತು. ಈ ಕಾರಣದಿಂದಾಗಿ ಬಾಲಕಿ ಸಾಕ್ಷಿಯ ಗುರು ದಹಿಯಾ ಹಲವರಿಂದ ವಿರೋಧ ಎದುರಿಸಬೇಕಾಗಿತ್ತು.
ಸಾಕ್ಷಿಯ ಹೆತ್ತವರಿಗೆ ತಮ್ಮ ಮಗಳು ಒಂದು ದಿನ ಒಲಿಂಪಿಕ್ಸ್ ಪದಕ ಪಡೆದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಳ್ಳುತ್ತಾಳೆಂಬ ಕನಸು ಕಂಡಿದ್ದರು. ಹೆತ್ತವರ ಕನಸನ್ನು ಸಾಕ್ಷಿ ಇದೀಗ ನನಸು ಮಾಡಿದ್ದಾರೆ.
‘‘ಕಳೆದ 12 ವರ್ಷಗಳ ಕಾಲ ಹಗಲು-ರಾತ್ರಿ ನಡೆಸಿದ ಹೋರಾಟದ ಪ್ರತಿಫಲ ಈ ಫಲಿತಾಂಶ. ನನ್ನ ಸೀನಿಯರ್ ಗೀತಾ ಫೋಗತ್ ಲಂಡನ್‌ನಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ಮಹಿಳಾ ಕುಸ್ತಿಪಟು ಆಗುತ್ತೇನೆಂದು ಯೋಚಿಸಿಯೇ ಇರಲಿಲ್ಲ.
ಸ್ಪರ್ಧೆಯಲ್ಲಿರುವ ಉಳಿದ ಕುಸ್ತಿಪಟುಗಳು ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ’’ ಎಂದು 23ರ ಹರೆಯದ ಸಾಕ್ಷಿ ಹೇಳಿದ್ದಾರೆ.
‘‘ಒಲಿಂಪಿಕ್ಸ್ ಏನೆಂದು ನನಗೆ ಗೊತ್ತಿರಲಿಲ್ಲ. ವಿಮಾನದಲ್ಲಿ ಪ್ರಯಾಣಿಸುವ ಉದ್ದೇಶದಿಂದ ನಾನು ಕ್ರೀಡಾಳುವಾಗಿದ್ದೆ. ಭಾರತವನ್ನು ಪ್ರತಿನಿಧಿಸಿದರೆ ಮಾತ್ರ ವಿಮಾನ ಏರಬಹುದು. ಹೆತ್ತವರು ನನಗೆ ಒತ್ತಡ ಹೇರದೇ ಕುಸ್ತಿಪಟು ಆಗಲು ಬೆಂಬಲ ನೀಡಿದ್ದರು’’ ಎಂದು ಸಾಕ್ಷಿ ಹೇಳಿದ್ದಾರೆ. ಸಾಕ್ಷಿ ರಿಯೋ ಗೇಮ್ಸ್‌ನಲ್ಲಿ ಭಾರತದ ಪದಕ ಬರ ನೀಗಿಸಿದ ಬೆನ್ನಲ್ಲೇ ಸಾಕ್ಷಿಯ ಕೋಚ್ ಕುಲ್‌ದೀಪ್ ಮಲಿಕ್ ಆಕೆಯನ್ನು ಭುಜದ ಮೇಲೆ ಕುಳ್ಳಿರಿಸಿ ಸಂಭ್ರಮಪಟ್ಟಿದ್ದರು.
ಮೈಮೇಲೆ ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದ ಸಾಕ್ಷಿ ಅಖಾಡದಲ್ಲಿ ಮಂಡಿವೂರಿ ತನ್ನ ಬದುಕಿನ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಅಖಾಡಕ್ಕೆ ನಮಿಸಿದರು.
‘‘ನನ್ನ ಕನಸು ನನಸಾಯಿತು. ಈ ರೀತಿ ಆಚರಿಸಬೇಕೆಂದು ಮೊದಲೇ ನಿರ್ಧರಿಸಿದ್ದೆ. ಒಲಿಂಪಿಕ್ಸ್‌ನಲ್ಲಿ ಪ್ರತಿಯೊಬ್ಬರೂ ಪದಕ ಗೆಲ್ಲಬೇಕೆಂಬ ಛಲ ಹೊಂದಿರುತ್ತಾರೆ. ಪದಕ ವಿಲ್ಲದೇ ದೇಶಕ್ಕೆ ವಾಪಸಾಗುವುದು ತುಂಬಾ ಕಷ್ಟ. ನಾನು ಹೆಚ್ಚು ಒತ್ತಡದಲ್ಲಿರಲಿಲ್ಲ. ಸೋತರೆ ಏನಾಗುತ್ತದೆ. ಗೆದ್ದರೆ ಏನಾಗುತ್ತದೆ ಎಂದು ಯೋಚಿಸದೇ ಹೋರಾಟಕ್ಕಿಳಿದೆ’’ ಎಂದು ಸಾಕ್ಷಿ ನುಡಿದರು.
ಸಾಕ್ಷಿ ರೋಹ್ಟಕ್‌ನಿಂದ ರಿಯೋಗೆ ತಲುಪಿದ ಹಿಂದೆ ಕಳೆದ 12 ವರ್ಷಗಳ ಸುದೀರ್ಘ ಶ್ರಮವಿದೆ. ಹರ್ಯಾಣದಲ್ಲಿ ಫೋಗತ್ ಸಹೋದರಿರೊಂದಿಗೆ ಬೆಳೆಯಲು ಸಾಕ್ಷಿ ಸಾಕಷ್ಟು ಬೆವರಿಳಿಸಿದ್ದಾರೆ.
‘‘ಬಲ್ಗೇರಿಯ ಹಾಗೂ ಸ್ಪೇನ್‌ನಲ್ಲಿ ನಡೆದ ಕುಸ್ತಿ ಶಿಬಿರದಲ್ಲಿ ಫೋಗತ್ ಸಹೋದರಿಯರು ಇದ್ದರು. ಅವರೊಂದಿಗೆ ನಾನು ತರಬೇತಿ ನಡೆಸಿದ್ದೆ. 2012ರಲ್ಲಿ ಗೀತಾ ದೀದಿ ನನಗೆ ದಾರಿ ತೋರಿಸಿದರು. ಗೀತಾ ದೀದಿ ಭಾರತಕ್ಕೆ ಹಲವು ಪದಕ ಗೆದ್ದುಕೊಟ್ಟಿದ್ದಾರೆ. ಅವರ ಸಾಧನೆ ನನಗೆ ಸ್ಫೂರ್ತಿಯಾಯಿತು. ನಿಧಾನವಾಗಿ ಗೆಲುವು ಸಾಧಿಸಲು ಆರಂಭಿಸಿದೆ’’ ಎಂದು ಸಾಕ್ಷಿ ಹೇಳಿದ್ದಾರೆ.
2010ರ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನ 59 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ ಸಾಕ್ಷಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಯಶಸ್ಸು ಕಂಡಿದ್ದರು. ನಾಲ್ಕು ವರ್ಷಗಳ ಬಳಿಕ ಡೇವಿಡ್ ಶುಲ್ಟ್ಸ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ 60 ಕೆಜಿ ತೂಕ ವಿಭಾಗದಲ್ಲಿ ಚೊಚ್ಚಲ ಚಿನ್ನ ಜಯಿಸಿದರು. 2014ರಲ್ಲಿ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವುದು ಸಾಕ್ಷಿ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣ.
ಈ ವರ್ಷದ ಮೇನಲ್ಲಿ ಇಸ್ತಾಂಬುಲ್‌ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಫೈನಲ್‌ಗೆ ತಲುಪಿದ್ದ ಸಾಕ್ಷಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಕೇಂದ್ರದ ಟಾಪ್ ಯೋಜನೆಗೆ ಆಯ್ಕೆಯಾದ ಸಾಕ್ಷಿ ಬಲ್ಗೇರಿಯ ಹಾಗೂ ಸ್ಪೇನ್‌ನಲ್ಲಿ ತರಬೇತಿ ಪಡೆಯಲು ತೆರಳಿದ್ದರು.
ಸಾಕ್ಷಿಗೆ ರೈಲ್ವೇಯಿಂದ 60 ಲಕ್ಷ ರೂ. ಬಹುಮಾನ
ಹೊಸದಿಲ್ಲಿ, ಆ.18: ಪ್ರಸ್ತುತ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಅಥ್ಲೀಟ್ ಸಾಕ್ಷಿ ಮಲಿಕ್‌ಗೆ ಇಂಡಿಯನ್ ರೈಲ್ವೆ 60 ಲಕ್ಷ ರೂ. ಬಹುಮಾನ ಘೋಷಿಸಿದೆ.
ಸಾಕ್ಷಿ ರೈಲ್ವೇಯ ಉದ್ಯೋಗಿಯಾಗಿದ್ದಾರೆ. ರೈಲ್ವೆ ಸಚಿವರು ಗೇಮ್ಸ್ ಆರಂಭಕ್ಕೆ ಮೊದಲೇ ಪದಕ ವಿಜೇತ ರೈಲ್ವೆಯ ಅಥ್ಲೀಟ್‌ಗಳಿಗೆ 1 ಕೋಟಿ, 75 ಲಕ್ಷ ರೂ. ಹಾಗೂ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅಥ್ಲೀಟ್‌ಗಳಿಗೂ 10 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಇಬ್ಬರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಹಾಗೂ ವಿನೇಶ್ ಫೋಗತ್ ಸಾಧನೆಯ ಬಗ್ಗೆ ಇಂಡಿಯನ್ ರೈಲ್ವೆ ಹೆಮ್ಮೆ ಪಡುತ್ತಿದೆ. ಸಾಕ್ಷಿ ಪ್ರಸ್ತುತ ಉತ್ತರ ವಲಯ ರೈಲ್ವೆಯಲ್ಲಿ ಹಿರಿಯ ಕ್ಲಾರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆಕೆಗೆ ಗಜೆಟೆಡ್ ಅಧಿಕಾರಿಯಾಗಿ ಭಡ್ತಿ ನೀಡಲಾಗುತ್ತದೆ ಎಂದು ಆರ್‌ಎಸ್‌ಪಿಬಿ ಕಾರ್ಯದರ್ಶಿ ರೇಖಾ ಯಾದವ್ ಹೇಳಿದ್ದಾರೆ.
ಸಾಕ್ಷಿ ಪದಕದ ಹಾದಿ
*ಅಂತಿಮ-32ರ ಪಂದ್ಯದಲ್ಲಿ ಮಲಿನ್ ಜೋಹನ್ನಾ ಮಾರ್ಟ್‌ಸನ್ ವಿರುದ್ಧ 5-4 ಅಂಕಗಳ ಅಂತರದ ಜಯ
*ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಮೊಡೊವಾದ ಮರಿಯಾನಾ ಚೆರ್ಡಿವಾ ವಿರುದ್ಧ 5-3 ಅಂತರದ ಗೆಲುವು
*ಕ್ವಾರ್ಟರ್‌ಫೈನಲ್‌ನಲ್ಲಿ ರಶ್ಯದ ವಾಲೆರಿಯಾ ಕೊಬ್ಲೊವಾ ವಿರುದ್ಧ 2-9 ಅಂಕಗಳ ಅಂತರದಿಂದ ಸೋಲು
*ರಿಪಿಚೇಜ್ ಸುತ್ತಿನಲ್ಲಿ ಕಿರ್ಗಿಸ್ತಾನದ ಟೈನೀಬೆಕೋವಾ ವಿರುದ್ಧ 8-5 ಅಂತರದ ಗೆಲುವು
‘ಸಾಕ್ಷಿ ಸಾಧನೆ ದೇಶಕ್ಕೆ ಹೆಮ್ಮೆ’
ಹೊಸದಿಲ್ಲಿ, ಆ.18: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌ಗೆ ಗುರುವಾರ ಅಭಿನಂದನೆ ಸಲ್ಲಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಾಕ್ಷಿ ಐತಿಹಾಸಿಕ ಸಾಧನೆಯ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆಂದು ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.
2016ರ ರಿಯೋ ಗೇಮ್ಸ್‌ನ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಪದಕ ಜಯಿಸಿರುವ ಸಾಕ್ಷಿ ಮಲಿಕ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಸಾಕ್ಷಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕೃತ ಟ್ವೀಟ್ಟರ್‌ನಲ್ಲಿ ತಿಳಿಸಿದ್ದಾರೆ.
‘‘ಸಾಕ್ಷಿಯ ಸಾಧನೆ ದೇಶದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ರಕ್ಷಾಬಂಧನದ ದಿನವೇ ಭಾರತದ ಸುಪುತ್ರಿ ಸಾಕ್ಷಿ ಕಂಚಿನ ಪದಕವನ್ನು ಜಯಿಸಿ, ಎಲ್ಲರಿಗೂ ಹೆಮ್ಮೆ ತಂದಿದ್ದಾರೆ’’ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಹಣಕಾಸು ಸಚಿವ ಅರುಣ್ ಜೈಟ್ಲಿ, ಕ್ರೀಡಾ ಸಚಿವ ವಿಜಯ್ ಗೋಯಲ್, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಅವರುಗಳು ಸಾಕ್ಷಿಗೆ ಅಭಿನಂದನೆ ಸಲ್ಲಿಸಿದ್ದಾರೆ.