ಗಾಯಾಳು ಕುಸ್ತಿಪಟು ವಿನೇಶ್ ಚೇತರಿಕೆಗೆ ಒಂದು ವಾರ ಅಗತ್ಯ
ರಿಯೋ ಡಿ ಜನೈರೊ,ಆ.18: ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನ ವೇಳೆ ಗಂಭೀರ ಗಾಯಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗತ್‌ಗೆ ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ ಒಂದುವಾರ ಅಗತ್ಯವಿದೆ ಎಂದು ಭಾರತದ ಅಥ್ಲೀಟ್ ತಂಡಗಳ ಮುಖ್ಯಸ್ಥ ರಾಕೇಶ್ ಗುಪ್ತಾ ತಿಳಿಸಿದ್ದಾರೆ.
ವಿನೀಶ್‌ಗೆ ಮೂಳೆ ನೋವಾಗಿಲ್ಲ. ಬಲಗಾಲಿನ ಸ್ನಾಯು ಬಿರುಕುಬಿಟ್ಟಿದೆ. ಆಕೆ 2 ವಾರ ಊರುಗೋಲು ಬಳಸಬೇಕಾಗುತ್ತದೆ. ಅವರು ಒಂದು ವಾರದಲ್ಲೇ ಚೇತರಿಸಿಕೊಳ್ಳು ವಿಶ್ವಾಸವಿದೆ ಎಂದು ಗುಪ್ತಾ ತಿಳಿಸಿದ್ದಾರೆ.
48 ಕೆಜಿ ತೂಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವಿನೇಶ್ ಚೀನಾದ ಎದುರಾಳಿ ಸನ್ ಯಾನನ್ ವಿರುದ್ಧ ಹೋರಾಡುತ್ತಿದ್ದಾಗಲೇ ಮಂಡಿನೋವು ಕಾಣಿಸಿಕೊಂಡ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆಗ ಮುನ್ನಡೆಯಲ್ಲಿದ್ದ ಚೀನಾದ ಸ್ಪರ್ಧಿ ಮುಂದಿನ ಸುತ್ತಿಗೆ ತೇರ್ಗಡೆಯಾದರು.
ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದ 21ರ ಹರೆಯದ ಫೋಗತ್‌ಗೆ ಐದು ನಿಮಿಷ ಚಿಕಿತ್ಸೆ ನೀಡಿದ ಬಳಿಕ ಸ್ಟ್ರಚರ್‌ನ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ಯಲಾಯಿತು.