ಡೋಪಿಂಗ್ ವಿವಾದ: ನರಸಿಂಗ ಯಾದವ್ ಒಲಿಂಪಿಕ್ಸ್‌ನಿಂದ ಔಟ್
ರಿಯೊ ಡಿ ಜನೈರೊ,ಆ.19: ಭಾರತದ ಮಹಿಳೆಯರು ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಬರ ನೀಗಿಸಿ ದಾಖಲೆ ಬರೆದಿರುವ ಸಂತಸದ ನಡುವೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಎದುರಾಗಿದೆ. ಡೋಪಿಂಗ್ ಕಳಂಕ ಎದುರಿಸುತ್ತಿದ್ದ ಭಾರತದ ಕುಸ್ತಿಪಟು ನರಸಿಂಗ ಯಾದವ್ ಅವರಿಗೆ ವಿಶ್ವ ಡೋಪಿಂಗ್ ತಡೆ ಸಂಸ್ಥೆ (ವಾಡಾ) ಮೇಲ್ಮನವಿಯ ಮೇರೆಗೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ. ಈ ಮೂಲಕ ಒಲಿಂಪಿಕ್ಸ್‌ನಿಂದ ಯಾದವ್ ನಿರ್ಗಮಿಸಬೇಕಾಗಿದೆ.
ಭಾರತದ ರಾಷ್ಟ್ರೀಯ ಡೋಪಿಂಗ್ ತಡೆ ಏಜೆನ್ಸಿ (ನಾಡಾ) ನೀಡಿದ್ದ ತೀರ್ಪಿನ ವಿರುದ್ಧ ವಾಡಾ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಕ್ರೀಡಾ ವ್ಯಾಜ್ಯ ಪರಿಹಾರ ನ್ಯಾಯಾಲಯ (ಸಿಎಎಸ್)ದ ತಾತ್ಕಾಲಿಕ ಸಮಿತಿ ಈ ಮಹತ್ವದ ತೀರ್ಪು ನೀಡಿದೆ.
ನಾಡಾ 2016ರ ಜೂನ್ 25 ಹಾಗೂ ಜುಲೈ 5ರಂದು ನಡೆಸಿದ ಎರಡು ಉದ್ದೀಪನಾ ಪರೀಕ್ಷೆಯಲ್ಲಿ ನರಸಿಂಗ ಯಾದವ್ ಉದ್ದೀಪನಾ ಔಷಧಿ ಸೇವಿಸಿರುವುದು ಖಚಿತಗೊಂಡಿತ್ತು. ಆದರೆ ತಾನು ಮತ್ತೊಬ್ಬ ಸಹ ಕುಸ್ತಿಪಟು ದುರುದ್ದೇಶಪೂರ್ವಕವಾಗಿ ಆಹಾರದಲ್ಲಿ ಕಲಬೆರಕೆ ಮಾಡಿದ್ದರ ಬಲಿಪಶುವಾದೆ ಎಂದು ನರಸಿಂಗ ಯಾದವ್ ಸಮರ್ಥಿಸಿಕೊಂಡ ಹಿನ್ನಲೆಯಲ್ಲಿ, ನಾಡಾ ಯಾದವ್ ಪರ ತೀರ್ಪು ನೀಡಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿತ್ತು.
ವಾಡಾ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಯಾದವ್‌ಗೆ ನಾಲ್ಕು ವರ್ಷ ಅಂತರರಾಷ್ಟ್ರೀಯ ಸ್ಪರ್ಧೆ ಮೇಲೆ ನಿಷೇಧ ಹೇರಬೇಕು ಎಂದು ಕೋರಿತ್ತು. ನಾಲ್ಕು ಗಂಟೆಗಳ ಸುಧೀರ್ಘ ವಿಚಾರಣೆ ನಡೆಸಿದ ತಾತ್ಕಾಲಿಕ ಸಮಿತಿ, ಅಂತಿಮವಾಗಿ ನಾಡಾ ತೀರ್ಪನ್ನು ತಳ್ಳಿಹಾಕಿತು. ಯದವ್ ಅವರ ವಾದವನ್ನು ಒಪ್ಪದ ಜೂನ್ 25ರ ಬಳಿಕ ಯಾದವ್ ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರೆ ಅದರ ಫಲಿತಾಂಶ ಅನೂರ್ಜಿತಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಯಾದವ್ ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ.
ಉಳಿದಂತೆ ಒಲಿಂಪಿಕ್ಸ್ ಕೂಟದ 13ನೇ ದಿನ ಪುರುಷರ ಹಾಕಿ ಫೈನಲ್ಸ್‌ನಲ್ಲಿ ಬೆಲ್ಜಿಯಂ ತಂಡವನ್ನು 4-2 ಅಂತರದಿಂದ ಸೋಲಿಸಿದ ಅರ್ಜೆಂಟೀನಾ ಚಿನ್ನದ ಪದಕ ಗೆದ್ದುಕೊಂಡಿದೆ.