ನರಸಿಂಗ್ಗೆ ನಾಲ್ಕು ವರ್ಷಗಳ ನಿಷೇಧ; ಒಲಿಂಪಿಕ್ಸ್ ಕನಸು ಭಗ್ನ
ರಿಯೋ ಡಿ ಜನೈರೋ, ಆ.19: ಡೋಪಿಂಗ್ ಆರೋಪದಲ್ಲಿ ಭಾರತದ ಕುಸ್ತಿಪಟು ನರಸಿಂಗ್ ಯಾದವ್ಗೆ ನೀಡಲಾಗಿದ್ದ ಕ್ಲೀನ್ ಚಿಟ್ ವಿರುದ್ಧ ವಾಡಾ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಪುರಸ್ಕರಿಸಿದ್ದು, ಇದರೊಂದಿಗೆ ಅವರ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಕನಸು ಭಗ್ನಗೊಂಡಿದೆ. ನಾಲ್ಕು ವರ್ಷಗಳ ನಿಷೇಧದ ಸಜೆ ಎದುರಿಸುವಂತಾಗಿದೆ.
ಶುಕ್ರವಾರ ನಿಗದಿಯಾಗಿದ್ದ ಪುರುಷರ 75 ಕೆ.ಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ನರಸಿಂಗ್ ಯಾದವ್ ಅವರಿಗೆ ಸ್ಪರ್ಧಿಸಲು ಅಡಚಣೆ ಉಂಟಾಗಿದೆ.ಅವರ ವಿರುದ್ಧ ನಿಷೇಧ ಇಂದಿನಿಂದ ಜಾರಿಗೆ ಬರಲಿದೆ. ಇದರಿಂದಾಗಿ ನರಸಿಂಗ ಕ್ರೀಡಾ ಗ್ರಾಮತೊರೆದು ತವರಿಗೆ ವಾಪಸಾಗಬೇಕಿದೆ. .
ಕಳೆದ ವರ್ಷ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಜಯಿಸಿದ್ದ ನರಸಿಂಗ್ ರಿಯೋ ಒಲಿಂಪಿಕ್ಸ್ಗೆ 74 ಕೆಜಿ ವಿಭಾಗದಲ್ಲಿ ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಬಳಿಕ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅವರು ಸಿಲುಕಿಕೊಂಡು ಸಮಸ್ಯೆ ಎದುರಿಸಿದ್ದರೂ, ರಾಷ್ಟ್ರೀಯ ಉದ್ದೀಪನ ನಿಗ್ರಹ ದಳ (ನಾಡಾ) ಅವರಿಗೆ ಕ್ಲೀನ್ಚಿಟ್ ನೀಡಿತ್ತು. ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು. ನಾಡಾ ತೀರ್ಪಿನ ವಿರುದ್ಧ ವಿಶ್ವ ಉದ್ದೀಪನ ನಿಗ್ರಹ ದಳ (ವಾಡಾ) ಕ್ರೀಡಾ ಮಧ್ಯಸ್ಥಿಕೆ ನ್ಯಾಯಲಯ (ಸಿಎಎಸ್) ಸಲ್ಲಿಸಿದ್ದ ಮೇಲ್ಮನವಿಯನ್ನು ಸಲ್ಲಿಸಿತ್ತು. ನರಸಿಂಗ್ ಅವರು ಸ್ಪರ್ಧೆಗೆ ತಯಾರಿ ನಡೆಸಿದ್ದರೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಲಯದ ತೀರ್ಪಿನಿಂದಾಗಿ ಆಘಾತ ಉಂಟಾಗಿದೆ.