‘‘ನಿಮ್ಮವರೇ ಗೆಲ್ಲಬೇಕು ಎಂದಾದರೆ ಒಲಿಂಪಿಕ್ಸ್ ಆಯೋಜಿಸಬೇಡಿ !’’

Update: 2016-08-19 06:40 GMT

ರಿಯೋ ಡಿ ಜನೈರೋ, ಆ.19: ‘‘ನಿಮ್ಮವರೇ ಗೆಲ್ಲಬೇಕು ಎಂದಾದರೆ ಒಲಿಂಪಿಕ್ಸ್ ಆಯೋಜಿಸಬೇಡಿ’’. ಹೀಗೆಂದು ನೋವಿನಿಂದ ಹೇಳಿದವರು ಫ್ರಾನ್ಸಿನ ಪೋಲ್ ವಾಲ್ಟರ್ ರೆನೋಡ್ ಲವಿಲ್ಲೆನಿ.

ಸೋಮವಾರ ಬ್ರೆಝಿಲ್‌ನ ತಿಯಾಗೊ ಬ್ರಾಝ್ ಡಾ ಸಿಲ್ವಾ ಅವರನ್ನು ಒಲಿಂಪಿಕ್ ಸ್ಟೇಡಿಯಂನಲ್ಲಿ ನೆರೆದ ಜನಸಮೂಹ ರಾಷ್ಟ್ರೀಯ ಹೀರೊ ಎಂಬಂತೆ ಹುರಿದುಂಬಿಸಿದ್ದರೆ, ರೆನೋಡ್ ಅವರನ್ನು ಅಪಹಾಸ್ಯ ಮಾಡಿತ್ತು. ಮಂಗಳವಾರ ನಡೆದ ಪದಕ ಪ್ರದಾನ ಸಮಾರಂಭದಲ್ಲೂ ಇದೇ ಅಪಹಾಸ್ಯ ಮುಂದುವರಿದಿತ್ತು. ಇದನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಚ್ ಕಟುವಾಗಿ ಟೀಕಿಸಿದ್ದರಲ್ಲದೆ, ಬ್ರೆಝಿಲ್ ಅಭಿಮಾನಿಗಳ ಕೃತ್ಯಆಘಾತಕಾರಿ ಎಂದು ವರ್ಣಿಸಿದ್ದರು. ಅವರ ಈ ಮಾತುಗಳು ರೆನೋಡ್ ಕಣ್ಣುಗಳಲ್ಲಿ ನೀರು ಹರಿಸಿತ್ತು.

‘‘ಹೀಗೆ ಯಾರಿಗೂ ಆಗದೇ ಇರಲಿ’’ ಎಂದು ಅವರು ಹೇಳಿದಾಗ ಮತ್ತೆ ಸ್ಟೇಡಿಯಂನಲ್ಲಿದ್ದವರು ಅವರನ್ನು ಅಪಹಾಸ್ಯ ಮಾಡಿದ್ದರು. ಸೋಮವಾರ ಬ್ರೆಝಿಲ್‌ನ ಡಾ ಸಿಲ್ವ ಆಶ್ಚರ್ಯಕರ ಫಲಿತಾಂಶದಲ್ಲಿ ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ರೆನೋಡ್‌ರನ್ನು ಸೋಲಿಸಿದ್ದರು. ಈ ಪೋಲ್ ವಾಲ್ಟ್ ಸ್ಪರ್ಧೆ ನಡೆಯುತ್ತಿದ್ದಾಗ ರೆನೋಡ್ ಅವರ ಏಕಾಗ್ರತೆಯನ್ನು ಸ್ಟೇಡಿಯಂನಲ್ಲಿದ್ದ ಜನರ ಅಪಹಾಸ್ಯಕಾರಿ ಬೊಬ್ಬೆ ಕೆಡಿಸಿತ್ತು ಹಾಗೂ ಅಂತಿಮ ಜಂಪ್ ನಲ್ಲಿ ಅವರು ಎಡವಿಯೇ ಬಿಟ್ಟಿದ್ದರು.

ಕ್ರೀಡಾ ದುರಭಿಮಾನಿಗಳ ಇಂತಹ ವರ್ತನೆ 1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಜೆಸ್ಸಿ ಓವನ್ಸ್ ನೋವನ್ನನುಭವಿಸಿದ ನಂತರ ಮತ್ತೆ ನಡೆದಿರಲಿಲ್ಲ ಎಂದು ಹೇಳಿದ ರೆನೋಡ್‌‘‘ಬ್ರೆಝಿಲ್ ಮಾತ್ರ ಗೆಲ್ಲಬೇಕೆಂಬುದು ಈ ದೇಶದ ಬಯಕೆಯಾದರೆ ಹಾಗೂ ಇತರರ ಮೇಲೆ ಉಗುಳುತ್ತಾರೆಂದಾದಲ್ಲಿ, ನೀವು ಒಲಿಂಪಿಕ್ಸ್ ಆಯೋಜಿಸಬಾರದು’’ ಎಂದು ನೋವಿನಿಂದ ಹೇಳಿದ್ದರು.

ಪದಕ ಪ್ರದಾನ ಸಮಾರಂಭದಲ್ಲಿ ಡಾ ಸಿಲ್ವಾ ಕೈಗಳನ್ನು ಮೇಲೆತ್ತಿ ಕ್ರೀಡಾಭಿಮಾನಿಗಳನ್ನು ಶಾಂತವಾಗಿಸಲು ಪ್ರಯತ್ನಿಸಿ, ವಿಶ್ವ ದಾಖಲೆ ವೀರನಾಗಿರುವ ಫ್ರಾನ್ಸ್ ದೇಶದ ಪೋಲ್ ವಾಲ್ಟರ್ ಹಾಗೂ ಲಂಡನ್ ಒಲಿಂಪಿಕ್ಸ್ ಚಿನ್ನ ವಿಜೇತರಾಗಿರುವ ಅವರನ್ನು ಪ್ರಶಂಸಿಸಿದರು. ಆಗ ರೆನೋಡ್ ಮತ್ತೆ ಕಣ್ಣೀರು ಹರಿಸಿದಾಗ ಅವರನ್ನು ಡಾ ಸಿಲ್ವ ಹಾಗೂ ಐಒಸಿ ಸದಸ್ಯ ಸರ್ಜೈ ಬುಬ್ಕಾ ಸಮಾಧಾನಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News