ಒಲಿಂಪಿಕ್ಸ್ 200 ಮೀ. ಓಟ: ಬೋಲ್ಟ್ ಹ್ಯಾಟ್ರಿಕ್

Update: 2016-08-19 18:25 GMT

 ರಿಯೋ ಡಿಜನೈರೊ,ಆ.19: ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್‌ನ 200 ಮೀ. ಓಟದಲ್ಲಿ ನಿರೀಕ್ಷೆಯಂತೆಯೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ 200 ಮೀ.ಓಟದಲ್ಲಿ ಹ್ಯಾಟ್ರಿಕ್ ಪದಕ ತನ್ನದಾಗಿಸಿಕೊಂಡರು.

ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಜಮೈಕಾದ ಓಟಗಾರ ಬೋಲ್ಟ್ ಗುರುವಾರ ರಾತ್ರಿ ಇಲ್ಲಿ ನಡೆದ 200 ಮೀ.ಓಟದ ಸ್ಪರ್ಧೆಯಲ್ಲಿ 19.78 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಒಟ್ಟು 8 ಪದಕಗಳನ್ನು ಜಯಿಸಿದ್ದಾರೆ. ಶುಕ್ರವಾರ ರಾತ್ರಿ 4-100 ಮೀ. ರಿಲೇ ಫೈನಲ್‌ನಲ್ಲಿ ಸ್ಪರ್ಧಿಸುವ ಮೂಲಕ ಒಲಿಂಪಿಕ್ಸ್‌ಗೆ ವಿದಾಯ ಹೇಳಲಿದ್ದಾರೆ.

ಬೋಲ್ಟ್ ಒಲಿಂಪಿಕ್ಸ್‌ನಲ್ಲಿ 200ಮೀ. ಓಟದ ಫೈನಲ್‌ನಲ್ಲಿ ನಿಧಾನಗತಿಯಲ್ಲಿ ಗುರಿ ತಲುಪಿದರು. ಕಳೆದ ವಾರ ರಿಯೋ ಗೇಮ್ಸ್‌ನ 100 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದ ಬೋಲ್ಟ್ ಸತತ ಎರಡನೆ ಚಿನ್ನ ಗೆದ್ದುಕೊಂಡರು. 2008 ಹಾಗೂ 2012ರ ಒಲಿಂಪಿಕ್ಸ್‌ನಲ್ಲಿ 100 ಮೀ. ಹಾಗೂ 200 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದ ಬೋಲ್ಟ್ ರಿಯೋ ಗೇಮ್ಸ್‌ನಲ್ಲೂ ಎರಡೂ ವಿಭಾಗದ ಓಟದಲ್ಲಿ ಹ್ಯಾಟ್ರಿಕ್ ಪೂರೈಸಿದರು.

200 ಮೀ. ಓಟದ ಫೈನಲ್‌ನಲ್ಲಿ ಕೆನಡಾದ ಆ್ಯಂಡ್ರೆ ಡಿ ಗ್ರಾಸ್(20.02 ಸೆ.) ಬೆಳ್ಳಿ ಪದಕ ಜಯಿಸಿದರು. ಫ್ರಾನ್ಸ್‌ನ ಕ್ರಿಸ್ಟೋಫ್ ಲೆಮೈಟ್ರೆ(20.12 ಸೆ.) ಕಂಚಿನ ಪದಕ ಗೆದ್ದುಕೊಂಡರು. ಬ್ರಿಟನ್‌ನ ಆ್ಯಡಮ್ ಜೆಮಿಲಿ ನಾಲ್ಕನೆ ಸ್ಥಾನ ಪಡೆದಿದ್ದಾರೆ.

ರವಿವಾರ 30ನೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಬೋಲ್ಟ್ 200 ಮೀ. ಓಟದ ಫೈನಲ್‌ನ ವಿನ್ನಿಂಗ್ ಟೈಮ್‌ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಅರ್ಹತೆ ನನಗಿದೆ: ಬೋಲ್ಟ್

ರಿಯೋ ಡಿ ಜನೈರೊ, ಆ.19: ‘‘ಒಲಿಂಪಿಕ್ಸ್‌ನಲ್ಲಿ ಸತತ ಮೂರನೆ ಬಾರಿ 200 ಮೀ. ಓಟದಲ್ಲಿ ಚಿನ್ನದ ಪದಕವನ್ನು ಜಯಿಸಿರುವ ತನಗೆ ಕ್ರೀಡೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿ ನಿಲ್ಲುವ ಅರ್ಹತೆಯಿದೆ’’ ಎಂದು ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ಅಭಿಪ್ರಾಯಪಟ್ಟಿದ್ದಾರೆ.

ರಿಯೋ ಗೇಮ್ಸ್‌ನಲ್ಲಿ 100 ಮೀ. ಹಾಗೂ 200 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಬೋಲ್ಟ್ ಶುಕ್ರವಾರ ರಾತ್ರಿ ನಡೆಯಲಿರುವ ರಿಲೇಯಲ್ಲೂ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವತ್ತ ಚಿತ್ತವರಿಸಿದ್ದಾರೆ.

‘‘ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಹಾಗೂ ಫುಟ್ಬಾಲ್ ಲೆಜಂಡ್ ಪೀಲೆ ಅವರಂತೆಯೇ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಲು ಯತ್ನಿಸುತ್ತಿರುವೆ. ನಾಳೆ ನಡೆಯಲಿರುವ ರಿಲೇಯಲ್ಲಿ ಏನಾಗುತ್ತದೆ ಎಂದು ಕಾದುನೋಡಲು ಬಯಸಿರುವೆ. ಮಾಧ್ಯಮಗಳು ನನ್ನನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿಗೆ ಸೇರಿಸುತ್ತವೆಯೋ ನೋಡಬೇಕು. ಈ ಕ್ಷಣಕ್ಕಾಗಿ ನನ್ನ ವೃತ್ತಿಜೀವನದುದ್ದಕ್ಕೂ ಶ್ರಮಪಟ್ಟಿರುವೆ. ಒಂದುದಿನ ವಿಶ್ವದ ಶ್ರೇಷ್ಠ ಆಟಗಾರನಾಗಬೇಕೆಂಬ ಬಯಕೆ ನನ್ನದು’’ ಎಂದು ಓಟದ ರಾಜ ಬೋಲ್ಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘‘ನಾನು ಶ್ರೇಷ್ಠ ಆಟಗಾರನೆಂದು ವಿಶ್ವಕ್ಕೆ ಸಾಬೀತುಪಡಿಸಲು ಇಲ್ಲಿಗೆ ಬಂದಿರುವೆ. ಆದ್ದರಿಂದಾಗಿ ಇದು ನನ್ನ ಕೊನೆಯ ಒಲಿಂಪಿಕ್ಸ್ ಎಂದು ಹೇಳುತ್ತಿರುವೆ. ನನಗೆ ಏನೂ ಸಾಬೀತುಪಡಿಸಲು ಉಳಿದಿಲ್ಲ. 8 ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ದೊಡ್ಡ ಸಾಧನೆ’’ ಎಂದು 4-100 ಮೀ. ರಿಲೇಯಲ್ಲಿ ಚಿನ್ನದ ಪದಕ ಜಯಿಸಿ ಸತತ 3 ಒಲಿಂಪಿಕ್ಸ್‌ನಲ್ಲಿ 100,200 ಮೀ. ಹಾಗೂ 4-100 ಮೀ. ರಿಲೇಯಲ್ಲಿ ಹ್ಯಾಟ್ರಿಕ್ ಚಿನ್ನ ಜಯಿಸುವ ವಿಶ್ವಾಸದಲ್ಲಿರುವ ಬೋಲ್ಟ್ ತಿಳಿಸಿದ್ದಾರೆ.

ಬೋಲ್ಟ್ ಸಾಧನೆಯನ್ನು ಅಮೆರಿಕದ ಸ್ವಿಮ್ಮರ್ ಮೈಕಲ್ ಫೆಲ್ಪ್ಸ್‌ಗೆ ಹೋಲಿಸಲಾಗುತ್ತಿದೆ.ಆದರೆ, ಬೋಲ್ಟ್ ತಾನೋರ್ವ ಶ್ರೇಷ್ಠ ಒಲಿಂಪಿಯನ್ ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕಿದರು.

‘‘ನಾನು ಶ್ರೇಷ್ಠ ಒಲಿಂಪಿಯನ್ ಎಂದು ಹೇಳಲಾರೆ. ಸ್ವಿಮ್ಮಿಂಗ್ ಹಾಗೂ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಗಳು ಸಂಪೂರ್ಣ ಭಿನ್ನವಾದವು. ಫೆಲ್ಪ್ಸ್ ತಾನೋರ್ವ ಶ್ರೇಷ್ಠ ಸ್ವಿಮ್ಮರ್ ಎಂದು ಸಾಬೀತುಪಡಿಸಿದ್ದಾರೆ. ಅವರು ಬಹಳಷ್ಟು ಪದಕ ಜಯಿಸಿದ್ದಾರೆ.

200 ಮೀ. ಓಟದ ಸ್ಪರ್ಧೆಯಲ್ಲಿ 19.78 ಸೆಕೆಂಡ್‌ನಲ್ಲಿ ಗುರಿ ತಲುಪಿ ಕೆನಡಾದ ಆ್ಯಂಡ್ರೆ ಡಿಗ್ರಾಸ್(20.02 ಸೆ.)ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದ ಬೋಲ್ಟ್‌ಗೆ ಏಳು ವರ್ಷಗಳ ಹಿಂದೆ ಬರ್ಲಿನ್‌ನಲ್ಲಿ ತಾನೇ ನಿರ್ಮಿಸಿದ್ದ ವಿಶ್ವ ದಾಖಲೆ(19.19 ಸೆ.) ಮುರಿಯಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಾಗಿದೆ.

 ‘‘ನಾನು ಅತ್ಯಂತ ವೇಗದ ಸಮಯದಲ್ಲಿ ಓಡಲು ಬಯಸಿದ್ದೆ. ವಿಶ್ವ ದಾಖಲೆಯನ್ನು ಮುರಿಯುವುದು ಅತ್ಯಂತ ಕಷ್ಟ ಎಂದು ನನಗೆ ಗೊತ್ತಿದೆ. ನಾನೀಗ ಪೂರ್ಣ ತೃಪ್ತನಾಗಿಲ್ಲ’’ ಎಂದು ಬೋಲ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News