ಒಲಿಂಪಿಕ್ಸ್: ಭಾರತದ ಅಭಿಯಾನ ಬಹುತೇಕ ಅಂತ್ಯ
ರಿಯೊ ಡಿ ಜನೈರೊ,ಆ20: ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಪದಕ ಗಳಿಸಿದ್ದ ಭಾರತ, ಈ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಪಡೆದ ಐತಿಹಾಸಿಕ ಬೆಳ್ಳಿ ಹಾಗೂ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಅವರು ಪಡೆದ ಕಂಚಿನ ಪದಕಕ್ಕೇ ತೃಪ್ತಿಪಟ್ಟುಕೊಳ್ಳುವುದು ಬಹುತೇಕ ಖಚಿತವಾಗಿದೆ. ಅಥ್ಲೆಟಿಕ್ಸ್‌ನ 4/400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ಎರಡೂ ತಂಡಗಳು 13ನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲವಾಗಿವೆ.
ಕುನ್ಹು ಮಹ್ಮದ್, ಮಹ್ಮದ್ ಅನಾಸ್, ಧರುನ್ ಅಯ್ಯಸ್ವಾಮಿ ಹಾಗೂ ರಾಜೀವ್ ಅರೋಕ್ಯ ಅವರನ್ನು ಒಳಗೊಂಡ ಪುರುಷರ ತಂಡ ಮೊದಲ ಸುತ್ತಿನ ಹೀಟ್ಸ್‌ನಲ್ಲಿ 3 ನಿಮಿಷ 2.24 ಸೆಕೆಂಡ್‌ನೊಂದಿಗೆ ಗುರಿ ತಲುಪಿ ಏಳನೇ ಸ್ಥಾನ ಪಡೆದು ಒಟ್ಟಾರೆ 13ನೇ ಸ್ಥಾನ ಗಳಿಸಿತು. ಅಗ್ರ 8 ತಂಡಗಳು ಮಾತ್ರ ಫೈನಲ್‌ಗೆ ರಹದಾರಿ ಪಡೆಯುತ್ತವೆ. ನಿರ್ಮಲಾ, ಟಿಂಕೂ ಲೂಕಾ, ಪೂವಮ್ಮ ಹಾಗೂ ಅನಿಲ್ದಾ ಅವರನ್ನೊಳಗೊಂಡ ಮಹಿಳಾ ತಂಡ 3 ನಿಮಿಷ 29.53 ಸೆಕೆಂಡ್‌ನೊಂದಿಗೆ ಗುರಿ ತಲುಪಿ ಹೀಟ್ಸ್ ಹಂತದಲ್ಲೇ ಹೊರಬಿತ್ತು.
ಮಹಿಳೆಯರ ಗಾಲ್ಫ್‌ನಲ್ಲಿ ಭಾರತದ ಅದಿತಿ ಅಶೋಕ್ ಮೂರನೇ ಸುತ್ತಿನ ಅಂತ್ಯದಲ್ಲಿ 31ನೇ ಸ್ಥಾನದಲ್ಲಿದ್ದಾರೆ.
ಮಹಿಳೆಯರ 20 ಕಿಲೋಮೀಟರ್ ನಡಿಗೆಯಲ್ಲಿ ಭಾರತದ ಖುಷ್ಬೀರ್ ಕೌರ್ 45ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರೆ, ಮತ್ತೊಬ್ಬ ಭಾರತೀಯ ಅಥ್ಲೀಟ್ ಸಪ್ನಾ ಪೂನಿಯಾ ಓಟ ಪೂರ್ಣಗೊಳಿಸಲು ವಿಫಲರಾದರು.