×
Ad

ಮೂರು ತಿಂಗಳಿನಿಂದ ಸಿಂಧುಗೆ ಫೋನ್‌ ಕೊಡದ ಗೋಪಿಚಂದ್‌

Update: 2016-08-20 14:23 IST

ರಿಯೋ ಡಿ ಜನೈರೊ, ಆ.20: "ಕಳೆದ ಮೂರು ತಿಂಗಳಿನಿಂದ ಸಿಂಧು  ಆಕೆಯ ಮೊಬೈಲ್‌ ಫೋನ್‌ ಮುಟ್ಟಿಲ್ಲ. ಆಕೆಗೆ ಫೋನ್‌ನ್ನು ವಾಪಸ್ ನೀಡುವುದು ನನ್ನ  ಮೊದಲ ಕೆಲಸ. ಎರಡನೆ ವಿಚಾರವೆಂದರೆ ಇಲ್ಲಿ ಬಂದು ಹನ್ನೆರಡು -ಹದಿಮೂರು ದಿನ  ಆಗಿದೆ. ಆಕೆಗೆ ಐಸ್‌ಕ್ರೀಮ್‌ ,  ಸಿಹಿ ಮೊಸರು ತಿನ್ನದಂತೆ ನಿಯಂತ್ರಣ ಹೇರಿದ್ದೆ. ಇನ್ನು ಸಿಂಧುವಿಗೆ ಏನೆಲ್ಲ ಇಷ್ಟವೊ ಅವೆಲ್ಲವನ್ನು ತಿನ್ನಬಹುದು ” ಎಂದು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು ಅವರ ಕೋಚ್‌ ಪಿ.ಗೋಪಿಚಂದ್ ತಿಳಿಸಿದ್ದಾರೆ.

ಕೋಚ್‌ ಗೋಪಿಚಂದ್‌ ಶಿಸ್ತಿನ ಮನುಷ್ಯ. ತನ್ನ ಅಕಾಡಮಿ ಸೇರಿದವರು ಅವರ ಮಾರ್ಗದರ್ಶನವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಸೈನಾ ನೆಹ್ವಾಲ್‌ ಈ ಹಿಂದೆ ಗೋಪಿಚಂದ್‌ ಬಳಿ ತರಬೇತಿ ಪಡೆದವರು. ಇದೀಗ  ಸಿಂಧು ಸರದಿ. ಅವರ ಬಳಿ ನಿಯಮ ಎಲ್ಲರಿಗೂ ಒಂದೆ. ಆಟದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ ಉದ್ದೇಶಕ್ಕಾಗಿ ಸಿಂಧು ಅವರ ಮೊಬೈಲ್‌ ಫೋನ್‌ನ್ನು ಗೋಪಿಚಂದ್ ಮೂರು ತಿಂಗಳ ಹಿಂದೆ ತನ್ನ ವಶಕ್ಕೆ ತೆಗೆದುಕೊಂಡಿದ್ದರು. ಆಕೆಯ ಇಷ್ಟದ ಐಸ್ಕ್ರೀಮ್‌, ಹೈದರಾಬಾದ್‌ ಬಿರಿಯಾನಿ, ಸಿಹಿ ಮೊಸರು ತಿನ್ನದಂತೆ ಗೋಪಿ ನಿರ್ಬಂಧ ವಿಧಿಸಿದ್ದರು.
ಸಿಂಧು ಪದಕ ಜಯಿಸಿದ ಬೆನ್ನಲ್ಲೆ ಶಿಸ್ತಿನ ಗುರು ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿದ್ದಾರೆ. ಸಿಂಧುಗೆ ಅಣ್ಣನಂತೆ ಎಲ್ಲವನ್ನು ಕೊಡಿಸಲು ಮುಂದಾಗಿದ್ದಾರೆ ಗೋಪಿಚಂದ್. 
"ಕಳೆದ ವಾರ ನೀನು ಪಟ್ಟ ಶ್ರಮದಿಂದಲೇ ನೀನು ಎರಡನೇ ಸ್ಥಾನಗಳಿಸುವಂತಾಯಿತು .  ಚಿನ್ನ ಸಿಕ್ಕಿಲ್ಲ ಎಂದು ಕೊರಗುವುದು ಬೇಡ. ಗೆದ್ದಿರುವುದು ಬೆಳ್ಳಿಯಾದರೂ, ತನಗೆ ಸಿಕ್ಕಿರುವುದು ಚಿನ್ನವೆಂದು ತಿಳಿದುಕೊಂಡು ಮುಂದುವರಿಯುವಂತೆ ಸಿಂಧುಗೆ  ಸಲಹೆ ನೀಡಿರುವುದಾಗಿ ಗೋಪಿಚಂದ್‌ ಹೇಳಿದ್ದಾರೆ.
ಸಿಂಧು  ಫೈನಲ್‌ನಲ್ಲಿ ಚೆನ್ನಾಗಿ ಆಡಿದ್ದಾರೆ.  ಆಕೆಯ ಆಟದ ಬಗ್ಗೆ ಹೆಮ್ಮೆ ಇದೆ. ಅಭಿಮಾನವಿದೆ. ಅವರ ಆಟ ಖುಶಿ ನೀಡಿದೆ. ಆಕೆ ಪದಕ ಪಡೆಯಲು ಪೋಡಿಯಮ್‌ ಏರುವುದನ್ನು ನಾನು ಬಯಸಿದ್ದೆ.  ಸಿಂಧು ಸಾಧನೆಯ ಮೂಲಕ  ರಿಯೋದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರುವುದನ್ನು ಮತ್ತು ರಾಷ್ಟ್ರ ಗೀತೆ ಮೊಳಗುವುದನ್ನು ನಾನು ಬಯಸಿದ್ದೆ ಇದೀಗ ಎಲ್ಲವೂ ನಿರೀಕ್ಷಿಸಿದಂತೆ ಆಗಿದೆ ಎಂದು ಗೋಪಿಚಂದ್‌ ಅಭಿಪ್ರಾಯಪಟ್ಟಿದ್ದಾರೆ.

"ಪೋಡಿಯಂನಲ್ಲಿ ನಿಲ್ಲುವ ಅವಕಾಶ ಮತ್ತು ಆ ಕ್ಷಣ ಅತ್ಯಮೂಲ್ಯವಾದದ್ದು. ಅಲ್ಲಿಯವರೆಗಿನ ಪಯಣ ತುಂಬಾ ವಿಶೇಷ. ಇಲ್ಲಿಯವರೆಗೆ ನಮ್ಮನ್ನು ತಂದು ನಿಲ್ಲಿಸಿದ ದೇವರಿಗೆ, ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಚಿರ ಋಣಿಯಾಗಿರುವೆ . ಪ್ರಧಾನಿಯವರ ಟ್ವೀಟ್  ಗೆ ಉತ್ತರಿಸಲು ನನ್ನ ಕೈಯಲ್ಲೀಗ ಫೋನ್ ಇಲ್ಲ " ಎಂದು ಸಿಂಧು ಹೇಳಿದ್ದಾರೆ. 
" ಶುಕ್ರವಾರ  ಕರೋಲಿನಾ ಮರೀನ್‌ ದಿನವಾಗಿತ್ತು. ಆಕೆ ಚೆನ್ನಾಗಿ ಆಡಿ ಚಿನ್ನ ಪಡೆದರು” ಸಿಂಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News