ರಿಯೋ ಅಥ್ಲೆಟಿಕ್ಸ್: ಭಾರತದ ಕಳಪೆ ಪ್ರದರ್ಶನ ಮುಂದುವರಿಕೆ
ರಿಯೋ ಡಿಜನೈರೊ,ಆ.20: ಭಾರತೀಯ ಅಥ್ಲೀಟ್‌ಗಳು ರಿಯೋ ಒಲಿಂಪಿಕ್ಸ್‌ನಲ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ. 4-400 ಮೀ. ರಿಲೇಯಲ್ಲಿ ಮಹಿಳಾ ಹಾಗೂ ಪುರುಷರ ತಂಡಗಳು ಫೈನಲ್‌ಗೆ ತಲುಪಲು ವಿಫಲವಾಗಿವೆ. ರೇಸ್‌ವಾಕ್‌ನಲ್ಲೂ ನೀರಸ ಪ್ರದರ್ಶನ ನೀಡಿರುವ ಭಾರತದ ಪರ ಓರ್ವ ಅಥ್ಲೀಟ್ ಸ್ಪರ್ಧೆಯನ್ನು ಪೂರ್ಣಗೊಳಿಸಲು ವಿಫಲರಾದರು.
ಮಹಿಳಾ ತಂಡ ಹೀಟ್ಸ್‌ನಲ್ಲಿ ಏಳನೆ ಸ್ಥಾನ ಪಡೆದರೆ, ಪುರುಷರ ತಂಡ ಅನರ್ಹವಾಗುವ ಮೂಲಕ ಮುಜುಗರಕ್ಕೀಡಾಯಿತು.
ನಿರ್ಮಲಾ ಶೆಯೊರನ್, ಟಿಂಟು ಲುಕಾ, ಎಂಆರ್ ಪೂವಮ್ಮ ಹಾಗೂ ಅನಿಲ್ಡಾ ಥಾಮಸ್ ಅವರಿದ್ದ ಭಾರತದ ಮಹಿಳಾ ರಿಲೇ ತಂಡ ಹೀಟ್2ರಲ್ಲಿ 3:29.33 ಸೆಕೆಂಡ್‌ನಲ್ಲಿ ಗುರಿ ತಲುಪಿತು.
ಮುಹಮ್ಮದ್ ಕುಂಜು, ಮುಹಮ್ಮದ್ ಅನಾಸ್, ಅಯ್ಯಸಾಮಿ ಧರುಣ್ ಹಾಗೂ ರಾಜೀವ್ ಅರೋಕಿಯಾ ಅವರನ್ನೊಳಗೊಂಡ ಪುರುಷರ ರಿಲೇ ತಂಡ 3:02.24 ಸೆಕೆಂಡ್‌ನಲ್ಲಿ ಗುರಿ ತಲುಪಿದರೂ, ಧರುಣ್ ಹಾಗೂ ರಾಜೀವ್ ನಡುವೆ ಬ್ಯಾಟನ್ ಬದಲಾವಣೆ ವೇಳೆ ತಪ್ಪೆಸಗಿದ ಕಾರಣ ಭಾರತ ಅನರ್ಹಗೊಂಡಿತು. ಎರಡು ಹೀಟ್ಸ್‌ಗಳ 16 ತಂಡಗಳಲ್ಲಿ ಭಾರತ 13ನೆ ಸ್ಥಾನ ಪಡೆಯಿತು.
ಮಹಿಳೆಯರ ಸ್ಪರ್ಧೆಯಲ್ಲಿ ನಿರ್ಮಲಾ ಭಾರತದ ಪರ ಓಟವನ್ನು ಆರಂಭಿಸಿದರು. ಟಿಂಟು ಲುಕಾ ಅವರು ನಿರ್ಮಲಾರಿಂದ ಬ್ಯಾಟನ್ ಪಡೆದರು. ಆದರೆ,ಅವರು ಸಮಯ ಉತ್ತಮಪಡಿಸಲು ವಿಫಲರಾದರು. ಇದರಿಂದಾಗಿ ಪೂವಮ್ಮ ಹಾಗೂ ಅನಿಲ್ಡಾಗೆ ವೇಗವಾಗಿ ಗುರಿ ತಲುಪಲು ಸಾಧ್ಯವಾಗಲಿಲ್ಲ. ಹೀಟ್-2ರಲ್ಲಿ ಜಮೈಕಾ, ಬ್ರಿಟನ್ ಹಾಗೂ ಕೆನಡಾ ಮೊದಲ ಮೂರು ಸ್ಥಾನ ಪಡೆದವು.
ಪ್ರತಿ ಹೀಟ್ಸ್‌ನ(1-2) ಮೊದಲ ಮೂರು ತಂಡಗಳು, ಎರಡೂ ಹೀಟ್ಸ್‌ನಲ್ಲಿ ವೇಗವಾಗಿ ಗುರಿ ತಲುಪಿದ 2 ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅಮೆರಿಕ(3:21.42) ಅಗ್ರ ತಂಡವಾಗಿ ಫೈನಲ್‌ಗೆ ತಲುಪಿತು. ಜಮೈಕಾ(3:22.38) ಹಾಗೂ ಉಕ್ರೇನ್(3:24.54 ಸೆ.) ಕ್ರಮವಾಗಿ 2 ಹಾಗೂ 3ನೆ ಸ್ಥಾನ ಪಡೆದವು.
ನಿರಾಸೆಗೊಳಿಸಿದ ರೇಸ್‌ವಾಕರ್‌ಗಳು: ಭಾರತದ ರೇಸ್‌ವಾಕರ್‌ಗಳಾದ ಸಂದೀಪ್ ಕುಮಾರ್ ಹಾಗೂ ಖುಷ್ಬೀರ್ ಕೌರ್ ಜೀವನಶ್ರೇಷ್ಠ ಸಮಯದಲ್ಲಿ ಗುರಿ ತಲುಪಲು ವಿಫಲರಾದರೆ, ಸಪ್ನಾ ಪೂನಿಯಾ ರೇಸ್‌ನ್ನು ಪೂರ್ಣಗೊಳಿಸಲು ವಿಲರಾದರು.
ಪುರುಷರ 50 ಕಿ.ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ಸಂದೀಪ್ 34ನೆ ಸ್ಥಾನವನ್ನು ಪಡೆದರೆ, ಮಹಿಳೆಯರ 20 ಕಿ.ಮೀ. ರೇಸ್‌ವಾಕ್‌ನಲ್ಲಿ ಖುಶ್ಬೀರ್ ಕೌರ್ 54ನೆ ಸ್ಥಾನ ಪಡೆದರು. ಸಪ್ನಾ ಅಂತಿಮ ಗೆರೆ ತಲುಪಲು ವಿಫಲರಾದರು.
ಪುರುಷರ 50 ಕಿ.ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ಸಂದೀಪ್ 49 ಸ್ಪರ್ಧಿಗಳ ಪೈಕಿ 4 ಗಂಟೆ, 7 ನಿಮಿಷ, 55 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಆರ್ಮಿಮ್ಯಾನ್ ಸಂದೀಪ್ ತನ್ನ ವೈಯಕ್ತಿಕ ಶ್ರೇಷ್ಠ ಸಮಯ(3:56.22) ತಲುಪಲು ವಿಫಲರಾದರು.
ವಿಶ್ವ ಚಾಂಪಿಯನ್ ಸ್ಲೋವಾಕಿಯದ ಮಟೆಜ್ ಟೋತ್(3:40.58) ಚಿನ್ನದ ಪದಕ ಪಡೆದರು. ಮಹಿಳೆಯರ 20 ಮೀ. ರೇಸ್‌ವಾಕ್‌ನಲ್ಲಿ ಅಮೃತಸರದ ಖುಷ್ಬೀರ್ 1:40.33 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಆದರೆ, ಸಪ್ನಾ 37.44 ಸೆಕೆಂಡ್‌ನಲ್ಲಿ 8 ಕಿ.ಮೀ. ಕ್ರಮಿಸಿದ ಬಳಿಕ ಗಾಯಾಳು ನಿವೃತ್ತಿಯಾದರು.