ಕುಸ್ತಿ: ಅರ್ಹತಾ ಸುತ್ತಿನಲ್ಲೇ ಸೋತ ಯೋಗೇಶ್ವರ್

Update: 2016-08-21 18:14 GMT

ರಿಯೋ ಡಿಜನೈರೊ, ಆ.21: ರಿಯೋ ಗೇಮ್ಸ್‌ನ ಪುರುಷರ 65 ಕೆಜಿ ತೂಕ ವಿಭಾಗದ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದ ಭಾರತದ ಹಿರಿಯ ಕುಸ್ತಿಪಟು ಯೋಗೇಶ್ವರ್ ದತ್ತ್ ಭಾರೀ ನಿರಾಸೆಗೊಳಿಸಿದರು.

ಯೋಗೇಶ್ವರ್ ಮೇಲೆ ಪದಕದ ನಿರೀಕ್ಷೆ ಇಡಲಾಗಿತ್ತು. ಆದರೆ, ರವಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಂಗೋಲಿಯದ ಗ್ಯಾಂರೊರಿಗಿನ್ ಮಂದಖ್‌ನರನ್ ವಿರುದ್ಧ 0-3 ಅಂಕಗಳ ಅಂತರದ ಆಘಾತಕಾರಿ ಸೋಲುಂಡರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಯೋಗೇಶ್ವರ್ ಗೇಮ್ಸ್‌ನ ಕೊನೆಯ ದಿನವಾದ ರವಿವಾರ ಭಾರತದ ಖಾತೆಗೆ ಮೂರನೆ ಪದಕ ಸೇರ್ಪಡೆಗೊಳಿಸುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, 2010ರ ಏಷ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಮಂಗೋಲಿಯದ ಕುಸ್ತಿಪಟು ದತ್ತ್‌ಗೆ ಪ್ರಧಾನ ಸುತ್ತಿಗೆ ತಲುಪಲು ಅವಕಾಶ ನೀಡದೇ ಆಘಾತ ನೀಡಿದರು.

ಮಂಗೋಲಿಯದ ಕುಸ್ತಿಪಟು ಫೈನಲ್‌ಗೆ ತಲುಪಿದ್ದರೆ ದತ್ತ್‌ಗೆ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸುವ ಸಾಧ್ಯತೆಯಿತ್ತು. ಆದರೆ, ಮಂಗೋಲಿಯ ಕುಸ್ತಿಪಟು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರನಡೆದರು.

ಮೊದಲಾವಧಿಯ 30 ಸೆಕೆಂಡ್‌ನಲ್ಲಿ ಮಂಗೋಲಿಯ ಕುಸ್ತಿಪಟು ಅಂಕಗಳಿಸಲು ಸಫಲವಾಗುವುದರೊಂದಿಎ 1-0 ಮುನ್ನಡೆಪಡೆದರು. ಆ ನಂತರ ಯೋಗೇಶ್ವರ್‌ರನ್ನು ಕೆಡವಿದ ಗ್ಯಾಂರೊರಿಗಿನ್ ಇನ್ನೆರಡು ಅಂಕ ಗಳಿಸಿದರು. ವಿರಾಮದ ವೇಳೆ ಯೋಗೇಶ್ವರ್ 0-3 ಹಿನ್ನಡೆಯಲ್ಲಿದ್ದರು. 2015ರಲ್ಲಿ ನಿರಂತರಗಾಯದ ಸಮಸ್ಯೆ ಎದುರಿಸಿದ್ದ ಯೋಗೇಶ್ವರ್ ಈ ವರ್ಷದ ಮಾರ್ಚ್‌ನಲ್ಲಿ ರಿಯೋ ಗೇಮ್ಸ್‌ಗೆ ಅರ್ಹತೆ ಪಡೆದಿದ್ದರು. ನಾಲ್ಕನೆ ಒಲಿಂಪಿಕ್ಸ್‌ನಲ್ಲಿ ಆಡಿರುವ 33 ರಹರೆಯದ ಹರ್ಯಾಣದ ಕುಸ್ತಿಪಟು ಯೋಗೇಶ್ವರ್‌ಗೆ ಇದು ಕೊನೆಯ ಒಲಿಂಪಿಕ್ಸ್.

ಮ್ಯಾರಥಾನ್‌ನಲ್ಲಿ ಭಾರತ ವಿಫಲ

ರಿಯೋ ಡಿಜನೈರೊ, ಆ.21: ಪುರುಷರ ಮ್ಯಾರಥಾನ್‌ನಲ್ಲಿ ಭಾರತದ ಗೋಪಿ ಹಾಗೂ ಖೇತ ರಾಮ್ ಕ್ರಮವಾಗಿ 25 ಹಾಗೂ 26ನೆ ಸ್ಥಾನ ಪಡೆದು ಗಮನ ಸೆಳೆದರು.

ಟ.ಗೋಪಿ (2:15.25 ನಿ.) ಹಾಗೂ ರಾಮ್ ಖೇತ(2:15.26 ನಿ.) ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ ಕೊನೆಯ ದಿನವಾದ ರವಿವಾರ ಮಿಂಚಿದರು.

ಭಾರತದ ಇನ್ನೋರ್ವ ಸ್ಪರ್ಧಿ ನಿತೇಂದ್ರ ನಾಗರ್ 2:22.52 ನಿಮಿಷದಲ್ಲಿ ಗುರಿ ತಲುಪಿ 84ನೆ ಸ್ಥಾನ ಪಡೆದರು.

ರವಿವಾರ ರಾತ್ರಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಂಚು ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News