5000 ಮೀ.ಓಟ: ಬ್ರಿಟನ್‌ನ ಫರ್ಹಾಗೆ ಚಿನ್ನ

Update: 2016-08-21 18:17 GMT

 ರಿಯೋ ಡಿಜನೈರೊ,ಆ.21: ಕಾಲುಗಳು ದಣಿದಿದ್ದರೂ ಒಲಿಂಪಿಕ್ಸ್‌ನ 5,000 ಮೀ.ಓಟದ ಫೈನಲ್‌ನಲ್ಲಿ ವೇಗವಾಗಿ ಓಡಿ ಮೊದಲ ಸ್ಥಾನ ಪಡೆದ ಬ್ರಿಟನ್‌ನ ಮೊ ಫರ್ಹಾ ಹೊಸ ಇತಿಹಾಸ ಬರೆದರು. ಒಲಿಂಪಿಕ್ಸ್‌ನಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಜಯಿಸಿದ ಅವರು ಸತತ ಎರಡನೆ ಬಾರಿ 10,000 ಹಾಗೂ 5,000 ಮೀ.ಓಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಫರ್ಹಾ 40 ವರ್ಷಗಳ ಬಳಿಕ ಒಲಿಂಪಿಕ್ಸ್‌ನ 10,000 ಹಾಗೂ 5,000 ಓಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಉಳಿಸಿಕೊಂಡ ವಿಶ್ವದ ಮೊದಲ ಓಟಗಾರನೆಂಬ ಕೀರ್ತಿಗೆ ಭಾಜನರಾದರು.

  33ರ ಪ್ರಾಯದ ಫರ್ಹಾ ಕಳೆದ ವಾರ ನಡೆದ 10,000 ಮೀ.ಓಟದ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮೊದಲ ಸ್ಥಾನ ಪಡೆಯಲು ಸಫಲರಾಗಿದ್ದರು. ಶನಿವಾರ ಇಲ್ಲಿ ನಡೆದ 5,000 ಮೀ. ಓಟದಲ್ಲೂ ಚಾಂಪಿಯನ್ ಎನಿಸಿಕೊಳ್ಳುವುದರೊಂದಿಗೆ ಡಬಲ್-ಡಬಲ್ ಸಾಧನೆ ಮಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಸತತ ಎರಡನೆ ಬಾರಿ 5000 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫರ್ಹಾ 13 ನಿಮಿಷ, 3.30 ನಿಮಿಷದಲ್ಲಿ ಗುರಿ ತಲುಪಿ ಪ್ರಶಸ್ತಿ ಉಳಿಸಿಕೊಂಡರು. ಕೀನ್ಯ ಮೂಲದ ಅಮೆರಿಕದ ಓಟಗಾರ ಪೌಲ್ ಚೆಲಿಮೊ(13:03.90 ನಿ.) ಬೆಳ್ಳಿ ಪದಕವನ್ನು ಜಯಿಸಿದರೆ, ಇಥಿಯೋಪಿಯದ ಹಾಗೊಸ್ ಗೆಬ್ರೆವೆಟ್(13:04.35 ನಿ.) ಕಂಚಿನ ಪದಕ ಜಯಿಸಿದ್ದಾರೆ.

ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ದೂರದ ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಫರ್ಹಾ 1972 ಹಾಗೂ 1976ರ ಮ್ಯೂನಿಚ್ ಹಾಗೂ ಮಾಂಟ್ರಿಯಲ್ ಗೇಮ್ಸ್‌ನಲ್ಲಿ ಡಬಲ್ ಸಾಧನೆ ಮಾಡಿದ್ದ ಫಿನ್‌ಲ್ಯಾಂಡ್‌ನ ಲಾಸ್ ವಿರೆನ್ ದಾಖಲೆಯನ್ನು ಸರಿದೂಗಿಸಿದರು. ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಫರ್ಹಾ ಈಗಾಗಲೇ 2015 ಹಾಗೂ 2013ರಲ್ಲಿ ಬೀಜಿಂಗ್ ಹಾಗೂ ಮಾಸ್ಕೊದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಡಬಲ್-ಡಬಲ್ ಸಾಧನೆ ಮಾಡಿದ್ದಾರೆ.

‘‘ಇದು ಪ್ರತಿಯೊಬ್ಬ ಅಥ್ಲೀಟ್‌ನ ಕನಸಾಗಿರುತ್ತದೆ. ಆದರೆ, ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. 10,000 ಮೀ. ಓಟದ ಬಳಿಕ ನನ್ನ ಕಾಲು ದಣಿದಿದ್ದವು. ಜನರು ನನ್ನ ರೂಮ್‌ಗೆ ಆಹಾರವನ್ನು ತಂದಕೊಡುತ್ತಿದ್ದರು. ಒಲಿಂಪಿಕ್ಸ್‌ನಲ್ಲಿ 4 ಚಿನ್ನದ ಪದಕ ಗೆದ್ದಿರುವುದಕ್ಕೆ ತುಂಬಾ ತೃಪ್ತಿ ತಂದಿದೆ. ನಾವು ಕನಸು ಕಂಡರೆ ಅದು ನಿಜವಾಗುತ್ತದೆ. ನನ್ನ ಮಕ್ಕಳಿಗಾಗಿ ಈ ಸಾಧನೆ ಮಾಡಲು ಬಯಸಿದ್ದೆ’’ಎಂದು ಫರ್ಹಾ ಹೇಳಿದ್ದಾರೆ.

                               

ಒಲಿಂಪಿಕ್ ಗೇಮ್ಸ್

                 2012 ಲಂಡನ್‌   ಚಿನ್ನ     5000 ಮೀ.

                 2012 ಲಂಡನ್‌      ಚಿನ್ನ   10,000 ಮೀ.

                 2016 ರಿಯೋ      ಚಿನ್ನ      5000 ಮೀ.

                 2016 ರಿಯೋ       ಚಿನ್ನ     10,000 ಮೀ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News