ಒಲಿಂಪಿಕ್ಸ್ ಹೈಜಂಪ್: ಬೀಟಿಯಾಗೆ ಐತಿಹಾಸಿಕ ಚಿನ್ನ

Update: 2016-08-21 18:19 GMT

ರಿಯೋ ಡಿಜನೈರೊ, ಆ.21: ಸ್ಪೇನ್‌ನ ಹಿರಿಯ ಅಥ್ಲೀಟ್ ರುತ್ ಬೀಟಿಯಾ(37 ವರ್ಷ) ರಿಯೋ ಒಲಿಂಪಿಕ್ಸ್‌ನ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸುವ ಮೂಲಕ ಇತಿಹಾಸ ಪುಸ್ತಕದಲ್ಲಿ ತನ್ನ ಹೆಸರು ಸೇರ್ಪಡೆಗೊಳಿಸಿದರು.

1996ರಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್‌ಗೆ ಕಾಲಿಟ್ಟಿರುವ ‘ಎವರ್‌ಗ್ರೀನ್’ ಬೀಟಿಯಾ ಅವರು 1.97 ಮೀ. ದೂರ ಜಿಗಿಯುವ ಮೂಲಕ ಮೊದಲ ಸ್ಥಾನ ಪಡೆದರು. 20 ವರ್ಷಗಳ ವೃತ್ತಿಜೀವನದಲ್ಲಿ ಬಹುದೊಡ್ಡ ಗೆಲುವು ಪಡೆದರು. ಬಲ್ಗೇರಿಯದ ಮಿರೆಲಾ ಡೆಮಿರೇವಾ ಹಾಗೂ ಕ್ರೊವೇಷಿಯದ ಬ್ಲಾಂಕಾ ವ್ಲಾಸಿಕ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದರು.

ಬೀಟಿಯಾಒಲಿಂಪಿಕ್ಸ್‌ನಲ್ಲಿ ಜಂಪಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿರುವ ಅತ್ಯಂತ ಹಿರಿಯ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

‘‘ನನಗೆ 37 ವರ್ಷವಾಗಿದೆ ಎಂದು ಗೊತ್ತಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ ಅತ್ಯಂತ ಹಿರಿಯ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಾನು ಈಗಲೂ ಹಿಂದಿನ ಉತ್ಸಾಹ ಹಾಗೂ ಸಂತೋಷ ನನ್ನಲ್ಲಿದೆ’’ ಎಂದು ಬೀಟಿಯಾ ಹೇಳಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೆ ಸ್ಥಾನ ಪಡೆದು ನಿರಾಶೆ ಅನುಭವಿಸಿದ್ದ ಬೀಟಿಯಾ ಕ್ರೀಡೆಯಿಂದ ನಿವೃತ್ತಿಯಾಗಿದ್ದರು. ಆದರೆ, ಕೆಲವೇ ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರೀಡೆಗೆ ಮರಳಿದ್ದ ಅವರು ಮಾಸ್ಕೊದಲ್ಲಿ 2013ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News