ಝಿಕಾ ವೈರಸ್ ಭೀತಿ: ಬ್ರೆಝಿಲ್‌ನಿಂದ ವಾಪಸಾದ ಅಥ್ಲೀಟ್ ಆಸ್ಪತ್ರೆಗೆ ದಾಖಲು
ಬೆಂಗಳೂರು, ಆ.22: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಸ್ವದೇಶಕ್ಕೆ ವಾಪಸಾಗಿರುವ ಭಾರತದ ಅಥ್ಲೀಟ್‌ವೊಬ್ಬರು ಜ್ವರ ಹಾಗೂ ಮೈ-ಕೈನೋವಿನ ಕಾರಣಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದು, ಝಿಕಾ ವೈರಸ್ ಶಂಕೆಯ ಮೇರೆಗೆ ಆಕೆಗೆ ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತಿದೆ.
30ರ ಪ್ರಾಯದ ಸುಧಾ ಸಿಂಗ್ ಶನಿವಾರ ಭಾರತಕ್ಕೆ ವಾಪಸಾಗಿದ್ದಾರೆ. ಗಂಟು ನೋವು, ದಣಿವು ಹಾಗೂ ರಕ್ತದೊತ್ತಡ ಹೆಚ್ಚಾದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಧಾ ರಿಯೋ ಗೇಮ್ಸ್‌ನಲ್ಲಿ 3000ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸುಧಾ ಅವರ ರಕ್ತದ ಮಾದರಿಯನ್ನು ಝಿಕಾ ವೈರಸ್‌ಪತ್ತೆ ಪರೀಕ್ಷೆಗಾಗಿ ವೈರಲಾಜಿ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ. ಬ್ರೆಝಿಲ್‌ನಲ್ಲಿ ಝಿಕಾ ವೈರಸ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಕಾರಣ ಬ್ರೆಝಿಲ್‌ನಿಂದ ವಾಪಸಾಗಿರುವ ಸುಧಾ ಸಿಂಗ್‌ರ ಬಗ್ಗೆ ನಾವು ಹೆಚ್ಚು ನಿಗಾವಹಿಸುತ್ತಿದ್ದೇವೆ. ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದು ವೈರಲ್ ಸೋಂಕು ಆಗಿರುವ ಸಾಧ್ಯತೆಯಿದೆ. ಆದರೆ, ಶಿಷ್ಟಾಚಾರದ ಪ್ರಕಾರ ಝಿಕಾ ವೈರಸ್ ಭೀತಿಯನ್ನು ನಿವಾರಿಸುವ ದಿಕ್ಕಿನಲ್ಲಿ ತಪಾಸಣೆ ನಡೆಸುವೆವು ಎಂದು ಸಾಯಿ ಕೇಂದ್ರದ ವೈದ್ಯೆ ಎಸ್.ಆರ್. ಸರಳಾ ಹೇಳಿದ್ದಾರೆ.
ಸುಧಾ ಜೊತೆ ಒಂದೇ ಕೊಠಡಿಯಲ್ಲಿದ್ದ ಮ್ಯಾರಥಾನ್ ಓಟಗಾರ್ತಿಯರಾದ ಒ.ಪಿ. ಜೈಶಾ, ಕವಿತಾ ರಾವತ್ ಕೂಡ ವೈರಲ್ ಸೋಂಕಿನ ಲಕ್ಷಣ ಕಾಣುತ್ತಿದೆ ಎಂದು ಹೇಳಿದ್ದಾರೆ.