×
Ad

ಕಣ್ಮನ ಸೆಳೆದ ರಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ

Update: 2016-08-22 23:34 IST

ರಿಯೋ ಡಿಜನೈರೊ, ಆ.22: ದಕ್ಷಿಣ ಅಮೆರಿಕದಲ್ಲಿ ಇದೇ ಮೊದಲ ಬಾರಿ 16 ದಿನಗಳ ಕಾಲ ನಡೆದ ಒಲಿಂಪಿಕ್ ಗೇಮ್ಸ್‌ಗೆ ರವಿವಾರ ರಾತ್ರಿ ತೆರೆ ಎಳೆಯಲಾಯಿತು. ಇಲ್ಲಿನ ಮಕರಾನ ಸ್ಟೇಡಿಯಂನಲ್ಲಿ ಮಳೆಯ ನಡುವೆಯೂ ಮೂರು ಗಂಟೆಗಳ ಕಾಲ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಬ್ರೆಝಿಲ್‌ನ ಕಲೆ, ಸಂಗೀತ ಹಾಗೂ ನೃತ್ಯವನ್ನು ಪ್ರದರ್ಶಿಸಲಾಯಿತು.

2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಆತಿಥ್ಯವಹಿಸಿಕೊಂಡಿರುವ ಟೋಕಿಯೊಗೆ ಒಲಿಂಪಿಕ್ ಧ್ವಜವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ರಿಯೋ ಮೇಯರ್ ಎಡ್ವರ್ಡ್ ಪೇಸ್ ಒಲಿಂಪಿಕ್ಸ್ ಧ್ವಜವನ್ನು ಐಒಸಿ ಅಧ್ಯಕ್ಷರಾದ ಬಾಕ್‌ಗೆ ವಾಪಸ್ ನೀಡಿದರು. ಬಾಕ್ ಟೋಕಿಯೊ ಗವರ್ನರ್ ಯೂರಿಕೊ ಕೊಕೆಗೆ ಹಸ್ತಾಂತರಿಸಿದರು.

ಧ್ವಜ ಹಸ್ತಾಂತರದ ಬಳಿಕ ಟೋಕಿಯೊ ನೀಡಿದ 12 ನಿಮಿಷಗಳ ಪ್ರದರ್ಶನ ಚಿತ್ತಾಕರ್ಷಕವಾಗಿತ್ತು. ಸ್ಟೇಡಿಯಂನಲ್ಲಿ ದೊಡ್ಡದಾದ ಹಸಿರು ಪೈಪ್‌ನ ಮೂಲಕ ಕಂಪ್ಯೂಟರ್ ಗೇಮ್ ಪಾತ್ರ ಸೂಪರ್ ಮಾರಿಯೋ ವೇಷದಲ್ಲಿ ಕಾಣಿಸಿಕೊಂಡ ಜಪಾನ್‌ನ ಪ್ರಧಾನಮಂತ್ರಿ ಶಿಂರೆ ಅಬೆ ಪ್ರೇಕ್ಷಕರಿಂದ ಭಾರೀ ಕರತಾಡನ ಗಿಟ್ಟಿಸಿಕೊಂಡರು.

‘‘ಇದೊಂದು ಅದ್ಭುತ ಒಲಿಂಪಿಕ್ಸ್, ಅದ್ಭುತ ನಗರ. ಕಳೆದ 16 ದಿನಗಳ ಕಾಲ ಬ್ರೆಝಿಲ್ ವಿಶ್ವವನ್ನು ತನ್ನತ್ತ ಸೆಳೆದಿತ್ತು’’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಎ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ.

16 ದಿನಗಳ ಕಾಲ ನಡೆದ 31ನೆ ಆವೃತ್ತಿಯ ರಿಯೋ ಗೇಮ್ಸ್ ಮುಕ್ತಾಯವಾಯಿತು ಎಂದು ಬಾಕ್ ಅಧಿಕೃತವಾಗಿ ಘೋಷಿಸಿದರು. ಗೇಮ್ಸ್‌ನಲ್ಲಿ 206 ದೇಶಗಳ 11,303 ಅಥ್ಲೀಟ್‌ಗಳು ಭಾಗವಹಿಸಿದ್ದರು. 46 ಚಿನ್ನ ಸಹಿತ ಒಟ್ಟು 121 ಪದಕಗಳನ್ನು ಬಾಚಿಕೊಂಡ ಅಮೆರಿಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.

 ಕಣ್ಮನ ಸೆಳೆಯುವ ಸಮಾರೋಪ ಸಮಾರಂಭವನ್ನು ವಿಶ್ವದ ಬಿಲಿಯನ್ ಜನರು ಟಿವಿ ಮೂಲಕ ವೀಕ್ಷಿಸಿದರು. 50 ಮಹಿಳೆಯರು ಹಾಗೂ 200 ನೃತ್ಯಗಾರರ ಪರೇಡ್‌ನ್ನು ಬ್ರೆಝಿಲ್‌ನ ರೂಪದರ್ಶಿ ಇಝಾಬೆಲ್ ಗೌಲರ್ಟ್ ಮುನ್ನಡೆಸಿದರು.

ಫುಟ್ಬಾಲ್ ಕ್ರೇಜ್ ಹೊಂದಿರುವ ಬ್ರೆಝಿಲ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ನೇಮರ್ ನೇತೃತ್ವದ ಫುಟ್ಬಾಲ್ ತಂಡ ಜರ್ಮನಿಯನ್ನು ಮಣಿಸಿ ಚೊಚ್ಚಲ ಚಿನ್ನ ಜಯಿಸಿತು. ಅಮೆರಿಕದ 19ರ ಹರೆಯದ ಜಿಮ್ನಾಸ್ಟಿಕ್ ತಾರೆ ಸಿಮೊನ್ ಬೇಲ್ಸ್ 4 ಚಿನ್ನದ ಪದಕ ಜಯಿಸಿ ಪ್ರಾಬಲ್ಯ ಮೆರೆದರು.

ಸ್ವಿಮ್ಮರ್ ಮೈಕಲ್ ಫೆಲ್ಪ್ಸ್ ಐದು ಚಿನ್ನ ಜಯಿಸಿ ಒಲಿಂಪಿಕ್ಸ್‌ನಲ್ಲಿ ಒಟ್ಟು 23 ಚಿನ್ನ   ಪದಕ ಜಯಿಸಿದ ಸಾಧನೆ ಮಾಡಿದರು. ವಿಶ್ವದ ವೇಗದ ವ್ಯಕ್ತಿ ಖ್ಯಾತಿಯ ಉಸೇನ್ ಬೋಲ್ಟ್ ಅಸಾಮಾನ್ಯ ಪ್ರದರ್ಶನ ನೀಡಿ ಮೂರು ಚಿನ್ನದ ಪದಕ ಕೊಳ್ಳೆ ಹೊಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News