ಬೆಂಗಳೂರು: ಅಥ್ಲೀಟ್ ಸುಧಾ ಸಿಂಗ್‌ಗೆ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ
Update: 2016-08-23 11:33 IST
ಬೆಂಗಳೂರು, ಆ.23: ರಿಯೋ ಒಲಿಂಪಿಕ್ಸ್‌ನ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದ ಭಾರತದ ಅಥ್ಲೀಟ್ ಸುಧಾ ಸಿಂಗ್ ನಗರದ ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರೆಝಿಲ್‌ನಿಂದ ವಾಪಸಾದ ತಕ್ಷಣ ಜ್ವರ, ಮೈ-ಕೈ ನೋವಿನ ಕಾರಣದಿಂದ ಶನಿವಾರ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಸುಧಾರ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಯಕ್ಕೆ ರವಾನಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಬ್ರೆಝಿಲ್‌ನ ಜನತೆಯನ್ನು ಕಾಡುತ್ತಿರುವ ಸೊಳ್ಳೆಗಳಿಂದ ಹರಡುವ ಝಿಕಾ ವೈರಸ್ ಶಂಕೆಯ ಮೇರೆಗೆ ಸುಧಾರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.
ಒಲಿಂಪಿಕ್ಸ್‌ನಲ್ಲಿ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಧಾ ಆಸ್ಪತ್ರೆಗೆ ಸೇರಿಸಲ್ಪಟ್ಟ ಬಳಿಕ ಅವರನ್ನು ಯಾರೂ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ.