ಸಚಿನ್, ಸೆಹ್ವಾಗ್ ದಾಖಲೆ ಮುರಿದ ಆರ್.ಅಶ್ವಿನ್!
ಹೊಸದಿಲ್ಲಿ, ಆ.23: ವಿಶ್ವದ ನಂ.1 ಆಲ್‌ರೌಂಡರ್ ಆರ್.ಅಶ್ವಿನ್ ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ದಿಲ್ಲಿಯ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ರ ದಾಖಲೆಯೊಂದನ್ನು ಮುರಿದಿದ್ದಾರೆ.
29ರ ಪ್ರಾಯದ ಅಶ್ವಿನ್ ಟೆಸ್ಟ್ ವೃತ್ತಿಜೀವನದಲ್ಲಿ ಆರನೆ ಬಾರಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಸಚಿನ್ ಹಾಗೂ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ತನ್ನ ಮುಡಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ತೆಂಡುಲ್ಕರ್(74 ಸರಣಿ) ಹಾಗೂ ಸೆಹ್ವಾಗ್(39 ಸರಣಿ) ಟೆಸ್ಟ್ ಕ್ರಿಕೆಟ್‌ನಲ್ಲಿ ತಲಾ 5 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಅಶ್ವಿನ್ ವೆಸ್ಟ್‌ಇಂಡೀಸ್ ವಿರುದ್ಧ ಸೋಮವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದಕ್ಕಾಗಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಕಪಿಲ್‌ದೇವ್, ಹರ್ಭಜನ್ ಸಿಂಗ್, ರಾಹುಲ್ ದ್ರಾವಿಡ್, ಮುಹಮ್ಮದ್ ಅಝರುದ್ದೀನ್ ಹಾಗೂ ಸೌರವ್ ಗಂಗುಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅಶ್ವಿನ್ ಕೇವಲ 36 ಟೆಸ್ಟ್ ಪಂದ್ಯಗಳು ಹಾಗೂ 13 ಸರಣಿಯಲ್ಲಿ 6ನೆ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಹೊಸ ಮೈಲುಗಲ್ಲು ತಲುಪಿದರು. ಭಾರತ ಮುಂಬರುವ ದಿನಗಳಲ್ಲಿ ಇನ್ನಷ್ಟು ಟೆಸ್ಟ್ ಸರಣಿಯನ್ನು ಆಡುತ್ತಿರುವ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ರ ವಿಶ್ವ ದಾಖಲೆ(11 ಸರಣಿಶ್ರೇಷ್ಠ ಪ್ರಶಸ್ತಿ)ಮುರಿಯವ ಅವಕಾಶವಿದೆ.
ವಿಂಡೀಸ್ ವಿರುದ್ಧದ ಸರಣಿಯಲ್ಲಿ 2 ಶತಕಗಳಿರುವ 235 ರನ್ ಗಳಿಸಿದ್ದ ಅಶ್ವಿನ್ 17 ವಿಕೆಟ್‌ಗಳನ್ನು ಉರುಳಿಸಿ ಭಾರತ ತಂಡ ವಿಂಡೀಸ್ ವಿರುದ್ಧ ಅದರದೇ ನೆಲದಲಿ ಮೊದಲ ಬಾರಿ ಭಾರೀ ಅಂತರದಿಂದ (2-0) ಸರಣಿ ಜಯಿಸಲು ನೆರವಾಗಿದ್ದರು.
ವಿಂಡೀಸ್‌ನಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದೆ: ರವಿಚಂದ್ರನ್ ಅಶ್ವಿನ್
ತಾನು ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನದೊಂದಿಗೆ ವಾಪಸಾಗುವುದಾಗಿ ಪ್ರವಾಸದ ಮೊದಲೇ ನಿರೀಕ್ಷಿಸಿದ್ದೆ ಎಂದು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ವಿಂಡೀಸ್ ವಿರುದ್ಧದ ಪ್ರತಿಯೊಂದು ಸರಣಿಯಲ್ಲೂ ಹೆಚ್ಚು ವಿಕೆಟ್ ಉಡಾಯಿಸಿದ ಸಾಧನೆಯೊಂದಿಗೆ ಗರಿಷ್ಠ ರನ್ ಗಳಿಸಲು ಸಾಧ್ಯವಾಗುತ್ತಿತ್ತು.ಈ ಬಾರಿಯೂ ಅದೇ ಪ್ರದರ್ಶನವನ್ನು ಮುಂದುವರಿಸಿದ್ದಾರೆ. 29ರ ಹರೆಯದ ಅಶ್ವಿನ್ ಸರಣಿಯಲ್ಲಿ 17 ವಿಕೆಟ್ ಪಡೆದಿದ್ದಾರೆ. ಎರಡು ಶತಕಗಳೊಂದಿಗೆ ಗರಿಷ್ಠ ರನ್ ದಾಖಲಿಸಿದ್ದಾರೆ. ಭಾರತಕ್ಕೆ ನಾಲ್ಕು ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಲ್ಲಿ ಜಯಿಸಲು ದೊಡ್ಡ ಕೊಡುಗೆ ನೀಡಿದ್ದರು.
ಓವಲ್‌ನ ಕ್ವೀನ್ಸ್ ಪಾರ್ಕ್‌ನಲ್ಲಿ ನಾಲ್ಕನೆ ಟೆಸ್ಟ್ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಟೆಸ್ಟ್‌ನ ಮೊದಲ ದಿನ 22 ಓವರ್‌ಗಳ ಆಟ ನಡೆಯಲು ಸಾಧ್ಯವಾಗಿತ್ತು. ಬಳಿಕ ಮಳೆಯಿಂದಾಗಿ ಆಟ ಸಾಧ್ಯವಾಗಲಿಲ್ಲ.ಈ ಕಾರಣದಿಂದಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.
‘‘ ವೈಯಕ್ತಿಕವಾಗಿ ಹೇಳುವುದಿದ್ದರೆ ನಾನು ಈ ರೀತಿಯ ಸರಣಿ ನಿರೀಕ್ಷಿಸಿದ್ದೆ ’’ ಎಂದು ಅಶ್ವಿನ್ ಹೇಳಿದ್ದಾರೆ.
‘‘ ನನ್ನಿಂದ ಎರಡು ಶತಕ ದಾಖಲಾಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ದೊಡ್ಡ ಕೊಡುಗೆ ನೀಡುವ ಬಗ್ಗೆ ಆಲೋಚನೆ ಮಾಡಿದ್ದೆ.ನಂ.6ರಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನಿರೀಕ್ಷಿಸಿರಲಿಲ್ಲ. ಟೆಸ್ಟ್ ಆರಂಭಕ್ಕೂ ಮೊದಲು ನಡೆಸಿದ ಕಠಿಣ ಅಭ್ಯಾಸ ಫಲ ನೀಡಿತು’’ ಎಂದು ಹೇಳಿದರು.
ಕೆಲವೊಮ್ಮೆ ನಮ್ಮ ನಿರೀಕ್ಷೆ ದೊಡ್ಡ ಸಾಧನೆಗೆ ನೆರವಾಗುತ್ತದೆ. ಕ್ರಿಕೆಟಿಗನಾಗಿ ನಾನು ಯಾವಾಗಲೂ ದೊಡ್ಡ ಸಾಧನೆಯ ನಿರೀಕ್ಷೆಯಲ್ಲಿರುತ್ತೇನೆ. ತಂಡಕ್ಕೆ ದೊಡ್ಡ ಕೊಡುಗೆ ನೀಡಬೇಕು ಮತ್ತು ಗೆಲುವಿನ ಯೋಜನೆಯೊಂದಿಗೆ ಕಣಕ್ಕಿಳಿಯುತ್ತೇನೆ’’ಎಂದು ಅಶ್ವಿನ್ ವಿವರಿಸಿದರು.
ಅಶ್ವಿನ್ ಖಾತೆಯಲ್ಲಿ ವಿಂಡಿಸ್ ಪ್ರವಾಸದಲ್ಲಿ 235 ರನ್ ಹಾಗೂ 17 ವಿಕೆಟ್‌ಗಳು ದಾಖಲಾಗಿವೆ. ಎರಡು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದ ಅವರು ಭಾರತ ಗೆಲುವು ಸಾಧಿಸಿದ್ದ ಎರಡು ಟೆಸ್ಟ್‌ಗಳಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಟೆಸ್ಟ್‌ನಲ್ಲಿ ಅವರು ಆರು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಶ್ವಿನ್ ಈ ಟೆಸ್ಟ್ ಸರಣಿಯಲ್ಲಿ ದೊಡ್ಡ ಸಾಧನೆ ಮಾಡಿದ್ದರೂ ಅವರಿಗೆ 200 ವಿಕೆಟ್‌ಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. 36 ಟೆಸ್ಟ್‌ಗಳನ್ನು ಆಡಿರುವ ಅಶ್ವಿನ್‌ಗೆ 200 ವಿಕೆಟ್‌ಗಳ ಮೈಲುಗಲ್ಲನ್ನು ಮುಟ್ಟಲು ಇನ್ನೂ 7 ವಿಕೆಟ್‌ಗಳ ಆವಶ್ಯಕತೆ ಇದೆ. ಅವರ ಖಾತೆಯಲ್ಲಿ ವಿಕೆಟ್‌ಗಳ ಸಂಖ್ಯೆ 193ಕ್ಕೆ ಏರಿದೆ.