ಸಾಕ್ಷಿ ವಿರುದ್ಧ ಆಕ್ಷೇಪಾರ್ಹ ಟೀಕೆ: ಪ್ರಕರಣ ದಾಖಲು
ಮೀರತ್, ಆ.23: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಸಾಕ್ಷಿ ಮಲಿಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿದ್ದ ವ್ಯಕ್ತಿಯೋರ್ವನ ವಿರುದ್ಧ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನದೀಮ್ ಎಂಬಾತ ಫೇಸ್‌ಬುಕ್‌ನಲ್ಲಿ ಒಲಿಂಪಿಯನ್ ಸಾಕ್ಷಿ ಮಲಿಕ್ ಹಾಗೂ ಆಕೆಯ ಜಾತಿಯ ಬಗ್ಗೆ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿದ್ದ.
ಸ್ಥಳೀಯ ಸಾಮಾಜಿಕ ಗುಂಪು ನೀಡಿದ ದೂರಿನ ಮೇರೆಗೆ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೈಬಲ್ ಘಟಕ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನದೀಮ್ ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತನೆಂದು ಬರೆದುಕೊಂಡಿದ್ದಾನೆ. ಪಕ್ಷದ ಜಿಲ್ಲಾ ಘಟಕದ ಮುಖ್ಯಸ್ಥ ಜೈವೀರ್ ಸಿಂಗ್, ಆರೋಪಿ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದಿದ್ದಾರೆ.