ಮೇರಿಕೋಮ್‌ರಿಂದ ಸರಿತಾದೇವಿ ತನಕ.. ಪ್ರತಿಯೊಬ್ಬರ ಮಾರ್ಗದರ್ಶಕ ಸಾಗರ್ ದಯಾಳ್
ಹೊಸದಿಲ್ಲಿ, ಆ.23: ಕಳೆದ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಐದು ಬಾರಿಯ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಮೇರಿಕೋಮ್ ಹಾಗೂ ಮಾಜಿ ವಿಶ್ವ ಚಾಂಪಿಯನ್ ಎಲ್. ಸರಿತಾದೇವಿ ಸಹಿತ ಹಲವು ಮಹಿಳಾ ಬಾಕ್ಸರ್‌ಗಳಿಗೆ ಮಾರ್ಗದರ್ಶಕರಾಗಿದ್ದ ಸಾಗರ್ ಮಾಲ್ ದಯಾಳ್ ಈ ವರ್ಷದ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜೈಪುರ ಮೂಲದ ದಯಾಳ್ ರಾಷ್ಟ್ರೀಯ ಕ್ರೀಡಾದಿನವಾದ ಆಗಸ್ಟ್ 29 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ದಯಾಳ್ 1995ರಲ್ಲಿ ಕೋಚ್ ಆಗುವ ಮೊದಲು ಓರ್ವ ಬಾಕ್ಸರ್ ಆಗಿದ್ದರು. 20 ವರ್ಷಗಳ ಕಾಲ ಭಾರತೀಯ ರೈಲ್ವೆಯಲ್ಲಿದ್ದ ದಯಾಳ್ 10 ವರ್ಷಗಳ ಹಿಂದೆ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ತಂಡಕ್ಕೆ ಸಪೋರ್ಟ್ ಸ್ಟಾಫ್ ಆಗಿ ಸೇರಿಕೊಂಡರು.
‘‘ಈ ಗೌರವಕ್ಕೆ ನಾನು ಕೃತಜ್ಞತೆ ಸಲ್ಲಿಸುವೆ. ನಾನು ಈ ಗೌರವಕ್ಕೆ ಅರ್ಹನೆಂದು ಮಹಿಳಾ ಬಾಕ್ಸರ್‌ಗಳು ನಂಬಿದ್ದಾರೆ. ಮೇರಿಕೋಮ್‌ರಿಂದ ಪಿಂಕಿ ರಾಣಿ ತನಕ ಹಲವು ಮಹಿಳಾ ಬಾಕ್ಸರ್‌ಗಳಿಗೆ ನಾನು ಕೋಚಿಂಗ್ ನೀಡಿದ್ದೇನೆ’’ ಎಂದು ಪಿಟಿಐಗೆ ನೀಡಿರುವ ಸಂದರ್ಶನವೊಂದರಲ್ಲಿ ದಯಾಳ್ ತಿಳಿಸಿದರು.
2014ರ ಏಷ್ಯನ್ ಗೇಮ್ಸ್‌ನಲ್ಲಿ ಸರಿತಾದೇವಿ ವಿವಾದಾತ್ಮಕ ಸೆಮಿಫೈನಲ್ ಸೋಲಿನ ಬಳಿಕ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ದಯಾಳ್ ಅವರು ಸರಿತಾರ ಬೆಂಬಲಕ್ಕೆ ನಿಂತಿದ್ದರು.
‘‘ಅದೊಂದು ಬೇಸರದ ಅಧ್ಯಾಯವಾಗಿತ್ತು. ಆಗ ನನಗೂ ತುಂಬಾ ಬೇಸರವಾಗಿತ್ತು. ನಾನು ಸರಿತಾರ ಕೋಚ್ ಆಗಿರುವ ಕಾರಣ ನನಗೆ ಜವಾಬ್ದಾರಿಯಿತ್ತು. ಆಕೆ ನಿಜವಾಗಲೂ ‘ಜಂಟಲ್‌ವುಮೆನ್’ ಎಂದು ದಯಾಳ್ ಹೇಳಿದ್ದಾರೆ.
ಪದಕ ನಿರಾಕರಿಸಿದ್ದಕ್ಕೆ ಸರಿತಾ ಒಂದುವರ್ಷ ನಿಷೇಧಕ್ಕೆ ಗುರಿಯಾಗಿದ್ದರೆ, ದಯಾಳ್ ಶಿಸ್ತುಕ್ರಮ ಎದುರಿಸಿದ್ದರು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ದಯಾಳ್ ರನ್ನು ದೋಷಮುಕ್ತಗೊಳಿಸಿತ್ತು.
ಮೇರಿಕೋಮ್‌ಗೆ ಕೋಚಿಂಗ್ ನೀಡಿದ ಬಗ್ಗೆ ಮಾತನಾಡಿದ ದಯಾಳ್, ‘‘ಮಣಿಪುರದ ಬಾಕ್ಸರ್ 2010ರಲ್ಲಿ ಐದನೆ ಬಾರಿ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ್ದನ್ನು ನೋಡಿರುವುದು ನಿಜಕ್ಕೂ ಸ್ಮರಣೀಯ ಕ್ಷಣವಾಗಿತ್ತು’’ ಎಂದರು.
‘‘ದೇಶದಲ್ಲಿ ಬಾಕ್ಸಿಂಗ್ ಫೆಡರೇಶನ್ ಅಸ್ತಿತ್ವದಲ್ಲಿ ಇರುತ್ತಿದ್ದರೆ, ಮೇರಿ ಹಾಗೂ ಸರಿತಾ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿದ್ದರು. ನಾವು ಆದಷ್ಟು ಬೇಗನೆ ಬಾಕ್ಸಿಂಗ್‌ನ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಾಗಿದೆ. ನನ್ನ ಶಿಷ್ಯೆ ಮೇರಿಕೋಮ್ ರಾಜ್ಯಸಭಾ ಸದಸ್ಯೆಯಾಗಿದ್ದು, ಆಕೆ ಎಲ್ಲ ಸಮಸ್ಯೆಯನ್ನು ನಿವಾರಿಸುತ್ತಾರೆಂಬ ವಿಶ್ವಾಸವಿದೆ’’ ಎಂದು ದಯಾಳ್ ತಿಳಿಸಿದರು.