×
Ad

ಸಾಕ್ಷಿ ತವರಿಗೆ ಆಗಮನ; ಹರ್ಯಾಣ ಸರಕಾರದಿಂದ 2.5 ಕೋ. ರೂ.ನಗದು ಪುರಸ್ಕಾರ

Update: 2016-08-25 00:20 IST

ಹೊಸದಿಲ್ಲಿ, ಆ.24: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌ಗೆ ಇಂದು ನಡೆದ ಹರ್ಯಾಣ ಸರಕಾರದ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ 2.5 ಕೋಟಿ ರೂ. ಮೊತ್ತದ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
  ರಿಯೋದಿಂದ ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಅವರಿಗೆ ಅದ್ದೂರಿಯ ಸ್ವಾಗತ ನೀಡಲಾಯಿತು. ಹರ್ಯಾಣದ ಸರಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅನಿಲ್ ವಿಜ್ ಮತ್ತಿತರರು ಸಾಕ್ಷಿ ಅವರನ್ನು ಸ್ವಾಗತಿಸಿದರು.
ಬಳಿಕ ಅವರು ಝಾಜರ್ ಜಿಲ್ಲೆಯ ಬಹಾದ್ದೂರ್‌ಗರ್‌ಗೆ ತೆರಳಿದರು. ಹರ್ಯಾಣದ ಮುಖ್ಯ ಮಂತ್ರಿ ಮನೋಹರ್‌ಲಾಲ್ ಕಟ್ಟರ್ , ಹಿರಿಯ ಸಚಿವರಾದ ಕ್ಯಾಪ್ಟನ್ ಅಭಿಮನ್ಯು ಮತ್ತು ಒ.ಪಿ.ಧನಕರ್ ಮತ್ತಿತರರು ಸ್ಟಾರ್ ಅಥ್ಲೀಟ್ ಸಾಕ್ಷಿ ಅವರನ್ನು ಆತ್ಮೀಯ ಸ್ಮಾಗತ ನೀಡಿದರು.
  ಬಳಿಕ ನಡೆದ ಸಮಾರಂಭದಲ್ಲಿ ಅವರನ್ನು ಸರಕಾರದ ವತಿಯಿಂದ ಸಾಂಪ್ರದಾಯಿಕ ರುಮಾಲು ತೊಡಿಸಿ ಅಭಿನಂದಿಸಲಾಯಿತು.‘ಬೇಟಿ ಪಡಾವೊ-ಬೇಟಿ ಬಚಾವೋ’ ಯೋಜನೆಗೆ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮನೋಹರ್ ಖಟ್ಟರ್ ಪ್ರಕಟಿಸಿದರು.
‘‘ ದೇಶದ ಮಹಿಳೆಯರು ರಿಯೋ ಒಲಿಂಪಿಕ್ಸ್‌ನಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ.ಸಾಕ್ಷಿ ಮಲಿಕ್ ಮತ್ತು ಪಿ.ವಿ.ಸಿಂಧು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಹರ್ಯಾಣದ ಸರಕಾರದ ಪರವಾಗಿ ಅಭಿನಂದನೆಗಳು ’’ ಎಂದು ಮುಖ್ಯ ಮಂತ್ರಿ ಕಟ್ಟರ್ ಹೇಳಿದರು.
ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವುದರೊಂದಿಗೆ ಹರ್ಯಾಣ ಕ್ರೀಡೆಯಲ್ಲಿ ಇತರ ರಾಜ್ಯಗಳಿಗಿಂತ ಮತ್ತೊಮ್ಮೆ ದೊಡ್ಡ ಸಾಧನೆ ಮಾಡಿದೆ.’’ ಎಂದರು.
  ‘‘ ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಸರಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ. ಸಾಕ್ಷಿ ಅವರು ದೇಶ, ರಾಜ್ಯ, ಕೋಚ್, ಅವರ ಊರಿನವರು ಮತ್ತು ಕುಟುಂಬಸ್ಥರುಸೇರಿದಂತೆ ಪ್ರತಿಯೊಬ್ಬರಿಗೆ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಸಾಕ್ಷಿ ಅವರು ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗೆ ಶೀಘ್ರದಲ್ಲೇ ಭಡ್ತಿ ದೊರೆಯಲಿದೆ. ಹರ್ಯಾಣ ಸರಕಾರ ಅವರಿಗೆ ರಾಜ್ಯದಲ್ಲಿ ಸೇವೆ ಸಲ್ಲಿಸಲು ಕ್ಲಾಸ್ -2 ನೌಕರಿ ನೀಡಲು ಸಿದ್ಧವಿದೆ. ಆದರೆ ಅವರು ಈ ಬಗ್ಗೆ ಪರಿಶೀಲನೆ ಮಾಡಲು ಸಮಯಾವಕಾಶ ಕೇಳಿದ್ದಾರೆ’’ ಎಂದು ಹೇಳಿದರು.
 ರಾಜ್ಯದಲ್ಲಿ ಒಂದು ಸಾವಿರ ಕ್ರೀಡಾ ಕೋಚ್‌ಗಳನ್ನು ನೇಮಕ ಮಾಡಲಾಗುವುದು .ಸಾಕ್ಷಿ ಅವರ ಊರು ಮೊಖ್ರಾ ಖಾಸ್‌ನಲ್ಲಿ ಸ್ಪೋರ್ಟ್ಸ್ ನರ್ಸರಿ ಮತ್ತು ಸ್ಟೇಡಿಯಂ ನಿರ್ಮಿಸಲಾಗುವುದು ಎಂದು ಖಟ್ಟರ್ ಪ್ರಕಟಿಸಿದರು.

     ಹರ್ಯಾಣ ಸರಕಾರವು ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಗೆಲ್ಲುವ ಕ್ರೀಡಾಪಟುವಿಗೆ 6 ಕೋಟಿ ರೂ. ಬಹುಮಾನ ಪ್ರಕಟಿಸಿತ್ತು ಎಂದು ಹೇಳಿದ ಈ ಸಂದರ್ಭದಲ್ಲಿ ಮಾತನಾಡಿದ ಸಾಕ್ಷಿ ಮಲಿಕ್ ಅವರು ಇಡೀ ದೇಶ ನನ್ನನ್ನು ಬೆಂಬಲಿಸಿದೆ. ಎಲ್ಲರಿಗೂ ನನ್ನ ಕೃತಜ್ಞತೆಗಳು. ಇನ್ನೂ ಮುಂದೆಯೂ ಇನ್ನಷ್ಟು ಪದಕಗಳನ್ನು ಗೆಲ್ಲಲು ಎಲ್ಲರ ಸಹಕಾರ ಪ್ರೋತ್ಸಾಹ ಅಗತ್ಯ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News