ಗೋಪಿಚಂದ್ ಅಕಾಡಮಿಯಿಂದ ಕಶ್ಯಪ್ ದೂರ
ಹೈದರಾಬಾದ್, ಆ.24:ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ.ಸಿಂಧು ಅವರನ್ನು ಆ ಮಟ್ಟಕ್ಕೆ ಬೆಳೆಸಿದ ಕೋಚ್ ಪಿ.ಗೋಪಿಚಂದ್ ಪರಿಶ್ರಮದ ಬಗ್ಗೆ ದೇಶದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ವೇಳೆ ಅವರ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದರೂ ಏನನ್ನು ಮಾಡಲು ಸಾಧ್ಯವಾಗದಿರುವ ಕಾರಣದಿಂದಾಗಿ ಯುವ ಆಟಗಾರ ಪಿ.ಕಶ್ಯಪ್ ಅಕಾಡಮಿಯನ್ನು ತೊರೆಯಲು ನಿರ್ಧರಿಸಿದ್ದಾರೆ.
ಕಶ್ಯಪ್ ಹಲವು ವರ್ಷಗಳಿಂದ ಗೋಪಿ ಅವರ ಹೈದರಾಬಾದ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ಅವರು ತನ್ನ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸುವ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರಿನ ಟಾಮ್ಸ್ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ಟಾಮ್ ಜೋನ್ ಮಾರ್ಗದರ್ಶನದಲ್ಲಿ ಕಶ್ಯಪ್ ತರಬೇತಿ ಪಡೆಯಲಿದ್ದಾರೆ.
ಕಶ್ಯಪ್ ಕಳೆದ ಮಾರ್ಚ್‌ನಲ್ಲಿ ಜರ್ಮನ್ ಓಪನ್ ಟೂರ್ನಿಯ ವೇಳೆ ಗಾಯಗೊಂಡಿದ್ದರು. ಇದರಿಂದಾಗಿ ಮಲೇಶ್ಯ ಸೂಪರ್ ಸಿರೀಸ್ ಪ್ರೀಮಿಯರ್ ಮತ್ತು ಸಿಂಗಾಪುರ ಓಪನ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.ಗಾಯದ ಕಾರಣದಿಂದಾಗಿ ಒಲಿಂಪಿಕ್ಸ್‌ನಲ್ಲಿ ಆಡುವ ಕನಸು ಭಗ್ನಗೊಂಡಿತ್ತು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದ ಕಶ್ಯಪ್ ಬ್ಯಾಡ್ಮಿಂಟನ್‌ನಲ್ಲಿ ಮತ್ತೆ ಮಿಂಚಲು ಬಯಸಿದ್ದಾರೆ. ಗೋಪಿಚಂದ್ ಅವರಿಂದ ದೂರವಾಗಿ ಹೊಸ ವಾತಾವರಣದಲ್ಲಿ ಭವಿಷ್ಯ ರೂಪಿಸುವ ಬಗ್ಗೆ ಕಶ್ಯಪ್ ಇದೀಗ ಚಿಂತನೆ ನಡೆಸಿದ್ದಾರೆ.
29ರ ಹರೆಯದ ಕಶ್ಯಪ್ ಅವರು ಇಂಡೋನೇಷ್ಯಾ ಗ್ರಾನ್ ಪ್ರಿ ಗೋಲ್ಡ್ ಟೂರ್ನಮೆಂಟ್‌ನಲ್ಲಿ ಆಡಲಿದ್ದಾರೆ. ಜಪಾನ್ ಮತ್ತು ಕೋರಿಯಾ ಓಪನ್‌ನಲ್ಲಿ ಆಡುವ ಉದ್ದೇಶಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ವೀಸಾ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ಭಾರತದ ನಂ.1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಪಿ.ಗೋಪಿಚಂದ್ ಅಕಾಡಮಿಯಿಂದ 2014ರಲ್ಲಿ ದೂರವಾಗಿದ್ದರು. ಬಳಿಕ ಅವರು ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ,,,,,,,,,,,,,,