ಒಲಿಂಪಿಕ್ಸ್‌ನಲ್ಲಿ ಶೂಟರ್‌ಗಳ ಕಳಪೆ ಪ್ರದರ್ಶನ ; ಬಿಂದ್ರಾ ಪುನರ್ ಪರಿಶೀಲನಾ ಸಮಿತಿಗೆ ಚೇರ್ಮನ್

Update: 2016-08-25 18:01 GMT

  ಹೊಸದಿಲ್ಲಿ, ಆ.25: ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ವೈಫಲ್ಯದ ಬಗ್ಗೆ ಪುನರಾವಲೋಕನ ನಡೆಸಲು ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ(ಎನ್‌ಆರ್‌ಎಐ) ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದು, ಒಲಿಂಪಿಯನ್ ಅಭಿನವ್ ಬಿಂದ್ರಾ ಸಮಿತಿಯ ಚೇರ್ಮನ್ ಆಗಿ ನೇಮಕಗೊಂಡಿದ್ದಾರೆ.
 ಮಾಜಿ ಟೆನಿಸ್ ಆಟಗಾರ ಮನೀಶ್ ಮಲ್ಹೊತ್ರಾ ಸಂಚಾಲಕರಾಗಿದ್ದಾರೆ. ಎನ್‌ಆರ್‌ಎಐ ಕಾರ್ಯದರ್ಶಿ ರಾಜೀವ್ ಭಾಟಿಯಾ ಮತ್ತು ಇಬ್ಬರು ಪತ್ರಕರ್ತರು ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿಯು ಆಗಸ್ಟ್ 30 ಅಥವಾ 30ರಂದು ಮೊದಲ ಸಭೆ ಸೇರಲಿದೆ.
ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೆ ಸ್ಥಾನದೊಂದಿಗೆ ಬರಿಗೈಯಲ್ಲಿ ವಾಪಸಾಗಿದ್ದರು. ಅವರು ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದರು.

ಒಟ್ಟು 12 ಶೂಟರ್‌ಗಳ ತಂಡ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ಶೂಟಿಂಗ್ ತಂಡದಿಂದ ಭಾರತಕ್ಕೆ ಹೆಚ್ಚು ಪದಕ ನಿರೀಕ್ಷಿಸಲಾಗಿತ್ತು. ಆದರೆ ಒಂದೇ ಒಂದು ಪದಕ ಗೆಲ್ಲದೆ ಶೂಟಿಂಗ್ ತಂಡ ಬರಿಗೈಯಲ್ಲಿ ನಿರ್ಗಮಿಸಿತ್ತು. ಹೀನಾ ಸಿಧು, ಗಗನ್ ನಾರಂಗ್, ಮಾನವ್‌ಜೀತ್ ಸಿಂಗ್ ಸಂಧು, ಜಿತು ರಾಯ್ ಮತ್ತು ಅಪೂರ್ವಿ ಚಾಂಡೆಲಾ ಮತ್ತಿತರ ಖ್ಯಾತ ಶೂಟರ್‌ಗಳು ಕಳಪೆ ಪ್ರದರ್ಶನ ನೀಡಿ ರಿಯೋದಿಂದ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News