×
Ad

ರಿಯೋ ಒಲಿಂಪಿಕ್ಸ್: ಜಪಾನ್,ಜಮೈಕಾದಿಂದ ಭಾರತ ಪಾಠ ಕಲಿಯುವುದೇ?

Update: 2016-08-26 23:46 IST

ಹೊಸದಿಲ್ಲಿ, ಆ.26: ರಿಯೋ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ 118 ಅಥ್ಲೀಟ್‌ಗಳನ್ನು ಸ್ಪರ್ಧಾ ಕಣಕ್ಕಿಳಿಸಿದರೂ ಕೇವಲ ಇಬ್ಬರು ಅಥ್ಲೀಟ್‌ಗಳು ಮಾತ್ರ ಪದಕ ಜಯಿಸಿದ್ದಾರೆ. ಭಾರತ ಮುಂಬರುವ ಒಲಿಂಪಿಕ್ಸ್‌ನಲ್ಲಿ ಈ ಕಳಪೆ ಪ್ರದರ್ಶನದಿಂದ ಹೊರಬಂದು ನಿರಂತರವಾಗಿ ಪದಕ ಜಯಿಸಬೇಕಾದರೆ ನಿರ್ದಿಷ್ಟ ಕ್ರೀಡೆಯತ್ತ ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ.

 ರಿಯೋ ಗೇಮ್ಸ್‌ನಲ್ಲಿ ಭಾರೀ ಹಿನ್ನಡೆ ಕಂಡಿರುವ ಭಾರತ 118 ಅಥ್ಲೀಟ್‌ಗಳ ಪೈಕಿ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸಿದರೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬೆಳ್ಳಿ ಪದಕ ಜಯಿಸಿ ಭಾರತದ ಮಾನ ಕಾಪಾಡಿದ್ದರು.

ಭಾರತದ ಕ್ರೀಡಾ ಫೆಡರೇಶನ್‌ಗಳು ಜಪಾನ್, ಹಂಗೇರಿ, ಕ್ಯೂಬಾ ಹಾಗೂ ಜಮೈಕಾದಿಂದ ಪಾಠ ಕಲಿಯಬೇಕಾಗಿದೆ. ಪದಕ ಗೆಲ್ಲಬಲ್ಲ ನಿರ್ದಿಷ್ಟ ಕ್ರೀಡೆಗಳತ್ತ ಹೆಚ್ಚು ಗಮನ ನೀಡಿದರೆ, ನಿರಂತರವಾಗಿ ಪದಕ ಜಯಿಸಬಹುದು ಎಂಬುದಕ್ಕೆ ಈ ರಾಷ್ಟ್ರಗಳು ಉತ್ತಮ ನಿದರ್ಶನ.

ರಿಯೋ ಗೇಮ್ಸ್‌ನಲ್ಲಿ ಜಪಾನ್ 12 ಚಿನ್ನ, 8 ಬೆಳ್ಳಿ ಹಾಗೂ 21 ಕಂಚು ಸಹಿತ ಒಟ್ಟು 41 ಪದಕಗಳನ್ನು ಗೆದ್ದುಕೊಂಡಿತ್ತು. ಜುಡೋವೊಂದರಲ್ಲೇ 12 ಪದಕ ಜಯಿಸಿತ್ತು. 2020 ಒಲಿಂಪಿಕ್ಸ್‌ನ ಆತಿಥ್ಯವಹಿಸಿರುವ ಜಪಾನ್ ಸ್ವಿಮ್ಮಿಂಗ್ ಹಾಗೂ ಕುಸ್ತಿಯಲ್ಲಿ ಕ್ರಮವಾಗಿ 9 ಹಾಗೂ 7 ಪದಕಗಳನ್ನು ಜಯಿಸಿತ್ತು.

ಹಂಗೇರಿ ಜಯಿಸಿರುವ 14 ಪದಕಗಳಲ್ಲಿ 9 ಪದಕಗಳನ್ನು ಈಜು ಸ್ಪರ್ಧೆಯಿಂದ ಗೆದ್ದುಕೊಂಡಿತ್ತು. ನಾಲ್ಕು ಪದಕಗಳು ಕತ್ತಿವರಸೆ ಹಾಗೂ ಒಂದು ಪದಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಗೆದ್ದುಕೊಂಡಿತ್ತು. ಕ್ಯೂಬಾ ಗೆದ್ದುಕೊಂಡಿರುವ 9 ಪದಕಗಳ ಪೈಕಿ 7 ಪದಕಗಳನ್ನು ಬಾಕ್ಸಿಂಗ್(04) ಹಾಗೂ ಕುಸ್ತಿ(03) ಸ್ಪರ್ಧೆಯಲ್ಲಿ ಜಯಿಸಿತ್ತು. ಉತ್ತರ ಕೊರಿಯಾ ಗೆದ್ದಿರುವ 7 ಪದಕಗಳ ಪೈಕಿ ನಾಲ್ಕು ಪದಕವನ್ನು ವೇಟ್‌ಲಿಫ್ಟಿಂಗ್‌ನಲ್ಲಿ ಜಯಿಸಿತ್ತು.

ನಿರೀಕ್ಷೆಯಂತೆಯೇ ಜಮೈಕಾ(11),ಇಥಿಯೋಪಿಯ(8) ಹಾಗೂ ಕೀನ್ಯ(13) ಎಲ್ಲ ಪದಕಗಳನ್ನು ಅಥ್ಲೆಟಿಕ್ಸ್ ವಿಭಾಗದಲ್ಲಿ ಗೆದ್ದುಕೊಂಡಿತ್ತು. ಜಮೈಕಾ ಅಥ್ಲೀಟ್‌ಗಳು ಮಧ್ಯಮ ಅಂತರದ ಓಟದತ್ತ, ಇಥಿಯೋಪಿಯ ಹಾಗೂ ಕೀನ್ಯ ಅಥ್ಲೀಟ್‌ಗಳು ಮಧ್ಯಮ ಹಾಗೂ ದೀರ್ಘ ಅಂತರದ ಓಟಗಳತ್ತ ಗಮನ ಹರಿಸಿದ್ದರು.

 ಈ ಎಲ್ಲ ದೇಶಗಳು ಆಯ್ದ ಕ್ರೀಡೆಗಳಲ್ಲಿ ಪದಕ ಗೆಲ್ಲುತ್ತಿರುವುದು ಇದೇ ಮೊದಲಲ್ಲ. 4 ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲೂ ಜಪಾನ್ ಜುಡೋದಲ್ಲಿ 7, ಸ್ವಿಮ್ಮಿಂಗ್‌ನಲ್ಲಿ 11ಹಾಗೂ ಕುಸ್ತಿಯಲ್ಲಿ 6 ಪದಕ ಜಯಿಸಿತ್ತು. ಹಂಗೇರಿ ಸ್ವಿಮ್ಮಿಂಗ್(3), ಕಾನೊಯ್ ಸ್ಪ್ರಿಂಟ್(6) ಹಾಗು ಕತ್ತಿವರಸೆ(1)ಯಲ್ಲಿ ಪದಕವನ್ನು ಗೆದ್ದುಕೊಂಡಿತ್ತು. ಜಮೈಕಾ ಅಥ್ಲೆಟಿಕ್ಸ್‌ನಲ್ಲಿ ಎಲ್ಲ 12 ಪದಕ ಜಯಿಸಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲೂ ಇದೇ ಟ್ರೆಂಡ್ ಕಂಡುಬಂದಿತ್ತು.

ಭಾರತ ಈ ತನಕ ಒಲಿಂಪಿಕ್ಸ್‌ನಲ್ಲಿ ಒಟ್ಟು 28 ಪದಕ ಜಯಿಸಿದೆ. ಇದರಲ್ಲಿ ರಿಯೋದಲ್ಲಿ ಜಯಿಸಿದ 2 ಪದಕ ಸೇರಿದೆ. ಭಾರತ 8 ಕ್ರೀಡೆಗಳಲ್ಲಿ ಈಪದಕವನ್ನು ಜಯಿಸಿದೆ. ಈ ಬಾರಿ 118 ಅಥ್ಲೀಟ್‌ಗಳು 15 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಭಾರತ ಹೆಚ್ಚು ಕ್ರೀಡೆಗಳಲ್ಲಿ ಪದಕ ಗೆಲ್ಲಲು ಯತ್ನಿಸಿತ್ತು. ಅಷ್ಟಕ್ಕೂ ಜಮೈಕಾ ಕೇವಲ 4 ಕ್ರೀಡೆಗಳಲ್ಲಿ, ಕೀನ್ಯಾ ಮೂರು ಹಾಗೂ ಇಥಿಯೋಪಿಯ 7 ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದವು. ಒಲಿಂಪಿಕ್ಸ್‌ನಿಂದ ಒಲಿಂಪಿಕ್ಸ್‌ಗೆ ಈ ದೇಶದ ಪದಕದ ಸಂಖ್ಯೆ ಹೆಚ್ಚಳವಾಗುತ್ತಿದೆ.

ಭಾರತ ಇತ್ತೀಚೆಗಿನ ದಿನಗಳಲ್ಲಿ ಶೂಟಿಂಗ್, ಕುಸ್ತಿ, ಬಾಕ್ಸಿಂಗ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಹೆಚ್ಚು ಪದಕ ಜಯಿಸಿದೆ. ನಿರ್ದಿಷ್ಟ ಕ್ರೀಡೆಗಳತ್ತ ಗಮನ ಹರಿಸಿ ಬೇರೆ ಕ್ರೀಡೆಯನ್ನು ನಿರ್ಲಕ್ಷಿಸುವುದು ಸಂಪೂರ್ಣ ಸಮಂಜಸವಲ್ಲ ಎಂದು ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಹಾಗೂ ರೋವರ್ ದತ್ತು ಭೋಕನಲ್ ತೋರಿಸಿಕೊಟ್ಟಿದ್ದಾರೆ.

ಅಲ್ಪ ಪ್ರಮಾಣದ ಬೆಂಬಲ ಹಾಗೂ ಕಠಿಣ ಪರಿಸ್ಥಿತಿಯ ಹೊರತಾಗಿಯೂ ಈ ಇಬ್ಬರು ಅಥ್ಲೀಟ್‌ಗಳು ರಿಯೋ ಗೇಮ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಯಾವುದೇ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ನಿರ್ದಿಷ್ಟ ಸ್ಪರ್ಧೆಗಳಲ್ಲಿ ಸ್ಥಿರವಾಗಿ ಪದಕಗಳನ್ನು ಜಯಿಸಬೇಕಾದರೆ ಉತ್ತಮ ವ್ಯವಸ್ಥೆಯ ಅಗತ್ಯವಿದೆ. ಹಂಗೇರಿ ರಿಯೋ ಗೇಮ್ಸ್‌ಗೆ 154 ಅಥ್ಲೀಟ್‌ಗಳನ್ನು 21 ಕ್ರೀಡೆಗಳಲ್ಲಿ ಸ್ಪರ್ಧೆಗಿಳಿಸಿತ್ತು. ಜಪಾನ್ 36 ಕ್ರೀಡೆಗಳಿಗೆ 346 ಅಥ್ಲೀಟ್‌ಗಳನ್ನು ಕಳುಹಿಸಿಕೊಟ್ಟಿತ್ತು. ಆದಾಗ್ಯೂ ಜಪಾನ್ ದೇಶ ಈಜು ಹಾಗೂ ಜುಡೋ ಕ್ರೀಡೆಯನ್ನೇ ಹೆಚ್ಚು ನೆಚ್ಚಿಕೊಂಡಿದೆ. ಭಾರತಕ್ಕೆ ಇಂತಹ ವಿಶ್ವಾಸಾರ್ಹತೆಯ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News