ದುಲೀಪ್ ಟ್ರೋಫಿ: ಇಂಡಿಯಾ ರೆಡ್‌ಗೆ ಭರ್ಜರಿ ಜಯ

Update: 2016-08-26 18:20 GMT

ಗ್ರೇಟರ್ ನೊಯ್ಡ, ಆ.26: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್(6-88) ದಾಳಿಗೆ ನಿರುತ್ತರವಾದ ಇಂಡಿಯಾ ಗ್ರೀನ್ ತಂಡ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ರೆಡ್ ವಿರುದ್ಧ 219 ರನ್‌ಗಳ ಅಂತರದಿಂದ ಸೋಲುಂಡಿದೆ.

ಗೆಲ್ಲಲು 497 ರನ್ ಕಠಿಣ ಸವಾಲು ಪಡೆದಿದ್ದ ಗ್ರೀನ್ ತಂಡ ನಾಲ್ಕನೆ ಹಾಗೂ ಅಂತಿಮ ದಿನದಾಟವನ್ನು 7 ವಿಕೆಟ್ ನಷ್ಟಕೆ 217 ರನ್‌ನಿಂದ ಮುಂದುವರಿಸಿತು. ಆದರೆ, ಒಂದು ಗಂಟೆಯೊಳಗೆ 10.2 ಓವರ್‌ಗಳಲ್ಲಿ ಉಳಿದ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದ ಕುಲ್‌ದೀಪ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉಡಾಯಿಸಿದರು.

42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯಕ ಸುರೇಶ್ ರೈನಾ 90 ರನ್ ಗಳಿಸಿ ಕುಲ್‌ದೀಪ್‌ಗೆ ಔಟಾದರು.

ಇದೇ ಮೊದಲ ಬಾರಿ ಈ ಪಂದ್ಯದಲ್ಲಿ ಪಿಂಕ್ ಚೆಂಡಿನಲ್ಲಿ ಆಡಲಾಗಿತ್ತು. ಭರ್ಜರಿ ಗೆಲುವು ಸಾಧಿಸಿರುವ ರೆಡ್ ತಂಡ ಆರು ಅಂಕವನ್ನು ಕಲೆ ಹಾಕಿದೆ. 77 ಹಾಗೂ 169 ರನ್ ಗಳಿಸಿದ್ದ ಆರಂಭಿಕ ದಾಂಡಿಗ ಅಭಿನವ್ ಮುಕುಂದ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇಂಡಿಯಾ ರೆಡ್ ತಂಡ ಇದೇ ಮೈದಾನದಲ್ಲಿ ಆ.29 ರಂದು ನಡೆಯಲಿರುವ ಮತ್ತೊಂದು ಚತುರ್ದಿನ ಪಂದ್ಯದಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಬ್ಲೂ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್

ಇಂಡಿಯಾ ರೆಡ್ ಪ್ರಥಮ ಇನಿಂಗ್ಸ್: 161

ಇಂಡಿಯಾ ಗ್ರೀನ್ ಪ್ರಥಮ ಇನಿಂಗ್ಸ್: 151

ಇಂಡಿಯಾ ರೆಡ್ ದ್ವಿತೀಯ ಇನಿಂಗ್ಸ್: 486/10

ಇಂಡಿಯಾ ಗ್ರೀನ್ ದ್ವಿತೀಯ ಇನಿಂಗ್ಸ್: 56.2 ಓವರ್‌ಗಳಲ್ಲಿ 277

(ರಾಬಿನ್ ಉತ್ತಪ್ಪ 72, ಸುರೇಶ್ ರೈನಾ 90, ಕುಲದೀಪ್ ಯಾದವ್ 6-88)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News