ಅಮೆರಿಕದಲ್ಲಿ ಭಾರತ-ವಿಂಡೀಸ್ ಟ್ವೆಂಟಿ-20 ಸರಣಿ ಇಂದು ಆರಂಭ

Update: 2016-08-26 18:25 GMT

ನ್ಯೂಯಾರ್ಕ್, ಆ.26: ಕ್ರಿಕೆಟ್ ಹುಚ್ಚು ಈಗ ಅಮೆರಿಕಕ್ಕೂ ಪಸರಿಸಿದ್ದು, ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಭಾರತದ ಕ್ರಿಕೆಟ್ ತಂಡ ಶನಿವಾರ ನಡೆಯಲಿರುವ ತನ್ನ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದೆ.

ಎರಡು ಪಂದ್ಯಗಳ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯ ವಾರಾಂತ್ಯದಲ್ಲಿ ನಡೆಯಲಿದ್ದು, ಇದೇ ಮೊದಲ ಬಾರಿ ಭಾರತ ತಂಡ ಅಮೆರಿಕದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಜ್ಜಾಗಿದೆ.

ಕೆರಿಬಿಯನ್ ನೆಲದಲ್ಲಿ ಸತತ ಎರಡನೆ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿದ್ದ ಭಾರತ ತಂಡಕ್ಕೆ ಎಂಎಸ್ ಧೋನಿ ವಾಪಸಾಗಿದ್ದಾರೆ. ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್‌ನಲ್ಲಿ 2 ಟ್ವೆಂಟಿ-20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಸೆಂಟ್ರಲ್ ಪಾರ್ಕ್ ಐಸಿಸಿಯಿಂದ ಪ್ರಾಮಾಣೀಕೃತ ಏಕದಿನ ದರ್ಜೆಯ ಸ್ಟೇಡಿಯಂ ವ್ಯವಸ್ಥೆ ಹೊಂದಿದೆ. ಈ ಸ್ಟೇಡಿಯಂನಲ್ಲಿ ಕಳೆದ ತಿಂಗಳು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಆರು ಪಂದ್ಯಗಳು ನಡೆದಿದ್ದವು.

ಭಾರತದ 14 ಸದಸ್ಯರ ತಂಡದಲ್ಲಿ 11 ಖಾಯಂ ಆಟಗಾರರು ತಂಡಕ್ಕೆ ವಾಪಸಾಗಿದ್ದಾರೆ. ಇವರು ಕಳೆದ ಮೇನಲ್ಲಿ ನಡೆದ ಝಿಂಬಾಬ್ವೆ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದರು. 2014ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ 2016ರಲ್ಲಿ ಇನ್ನು ಕೇವಲ ಏಳು ಪಂದ್ಯಗಳನ್ನು ಆಡಲಿದ್ದಾರೆ.

ಧೋನಿ ವೆಸ್ಟ್‌ಇಂಡೀಸ್ ವಿರುದ್ಧ 2 ಟ್ವೆಂಟಿ-20 ಹಾಗೂ ನ್ಯೂಝಿಲೆಂಡ್ ವಿರುದ್ಧ ಭಾರತದಲ್ಲಿ 5 ಪಂದ್ಯಗಳ ಏಕದಿನ ಸರಣಿ ಆಡಲಿದ್ದಾರೆ.

ಧೋನಿ ಝಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ಆಗ ಭಾರತ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಗೆದ್ದುಕೊಂಡಿತ್ತು.

ಭಾರತ-ವಿಂಡೀಸ್ ನಡುವೆ ನಡೆಯಲಿರುವ ಟ್ವೆಂಟಿ-20 ಸರಣಿ ಅಮೆರಿಕದಲ್ಲಿ ಹೊಸ ಮಾರುಕಟ್ಟೆ ಹಾಗೂ ಪ್ರೇಕ್ಷಕರನ್ನು ತಲುಪಲು ಇಟ್ಟಿರುವ ಮೊದಲ ಹೆಜ್ಜೆ.

ನಾನು ಇದೇ ಮೊದಲ ಬಾರಿ ಧೋನಿಯೊಂದಿಗೆ ಕೆಲಸ ಮಾಡುತ್ತಿರುವೆ. ನಾವಿಬ್ಬರು ಒಟ್ಟಿಗೆ ಕೆಲವು ಪಂದ್ಯಗಳನ್ನು ಆಡಿದ್ದೇವೆ. ಧೋನಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ ಎಂದು ಭಾರತದ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಮತ್ತೊಂದೆಡೆ, ವೆಸ್ಟ್‌ಇಂಡೀಸ್ ತಂಡವನ್ನು ಡರೆನ್ ಸಮ್ಮಿ ಬದಲಿಗೆ ಹೊಸ ನಾಯಕ ಕಾರ್ಲಸ್ ಬ್ರಾತ್‌ವೈಟ್ ಮುನ್ನಡೆಸಲಿದ್ದಾರೆ. ಈ ವರ್ಷ ಕೋಲ್ಕತಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಂತಿಮ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸುವುದರೊಂದಿಗೆ ಬ್ರಾತ್‌ವೈಟ್ ಬೆಳಕಿಗೆ ಬಂದಿದ್ದರು.

ತಂಡಗಳು:

 ಭಾರತ: ಎಂ.ಎಸ್. ಧೋನಿ(ನಾಯಕ), ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಕೆ.ಎಲ್. ರಾಹುಲ್, ಮುಹಮ್ಮದ್ ಶಮಿ, ಆರ್.ಅಶ್ವಿನ್, ರವೀಂದ್ರ ಜಡೇಜ, ರೋಹಿತ್ ಶರ್ಮ, ಶಿಖರ್ ಧವನ್, ಸ್ಟುವರ್ಟ್ ಬಿನ್ನಿ, ಉಮೇಶ್ ಯಾದವ್, ವಿರಾಟ್ ಕೊಹ್ಲಿ.

ವೆಸ್ಟ್‌ಇಂಡೀಸ್: ಕಾರ್ಲೊಸ್ ಬ್ರಾತ್‌ವೈಟ್(ನಾಯಕ), ಆಂಡ್ರೆ ಫ್ಲೆಚರ್, ಆಂಡ್ರೆ ರಸ್ಸಲ್, ಕ್ರಿಸ್ ಗೇಲ್, ಡ್ವೇಯ್ನಿ ಬ್ರಾವೊ, ಎವಿನ್ ಲೂವಿಸ್, ಜೇಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್, ಕೀರೊನ್ ಪೊಲಾರ್ಡ್, ಲೆಂಡ್ಲ್ ಸಿಮ್ಮನ್ಸ್, ಮರ್ಲಾನ್ ಸ್ಯಾಮುಯೆಲ್ಸ್, ಸ್ಯಾಮುಯೆಲ್ ಬದ್ರೀ, ಸುನೀಲ್ ನರೇನ್.

ಪಂದ್ಯದ ಸಮಯ: ರಾತ್ರಿ 7:30(ಭಾರತೀಯ ಕಾಲಮಾನ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News